ತುಮಕೂರು :
ಇಂದು ಇತಿಹಾಸ ಪ್ರಸಿದ್ಧ ಶೆಟ್ಟಿಹಳ್ಳಿ ಆಂಜನೇಯ ಸ್ವಾಮಿಯ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನೆರವೇರಿದೆ. ಶೆಟ್ಟಿಹಳ್ಳಿ ಜಾತ್ರೆಯ ಪ್ರಯುಕ್ತ ನಗರದಾದ್ಯಂತ ಪಾನಕ, ಪ್ರಸಾದ ಮತ್ತು ಅನ್ನಸಂತರ್ಪಣೆಯನ್ನು ಮಾಡಲಾಗಿದ್ದು, ನಗರದ ರೈಲ್ವೇ ಸ್ಟೇಷನ್ ಗೆಳೆಯರ ಬಳಗದ ವತಿಯಿಂದಲೂ ಅನ್ನಸಂತರ್ಪಣೆ ನಡೆಯಿತು.
ವಿಶೇಷವೆಂದರೆ ಹಿಂದೂ, ಮುಸ್ಲಿಂ ಎನ್ನದೇ ಎಲ್ಲಾ ಧರ್ಮದವರು ಸೇರಿ ಈ ಅನ್ನ ಸಂತರ್ಪಣೆಯನ್ನು ಏರ್ಪಡಿಸಿದರು. ಮುಸ್ಲಿಂ ಭಾಂದವರು ಕೂಡ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೇಸರಿ ಶಾಲು ಧರಿಸಿ ಬಂದಂತಹ ಭಕ್ತರಿಗೆ ಪ್ರಸಾದವನ್ನು ಬಡಿಸಿ ಭಾವೈಕ್ಯತೆ ಮೆರೆದರು.
ಇನ್ನು ಸಾವಿರಾರು ಜನರಿಗೆ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು. ಅನ್ನಸಂತರ್ಪಣೆ ವೇಳೆ ಪಲಾವ್, ಮೊಸರನ್ನ, ಕೇಸರಿಬಾತ್ ಗಳನ್ನು ಭಕ್ತರಿಗೆ ವಿತರಿಸಲಾಯಿತು. ಇದೇ ವೇಳೆ ಮಜ್ಜಿಗೆ, ಕೋಸಂಬರಿ, ಪಾನಕಗಳನ್ನ ಕೂಡ ವಿತರಿಸಲಾಯ್ತು. ಇಲ್ಲಿ ಬಂದಂತಹ ಭಕ್ತರು ಶ್ರೀ ಆಂಜನೇಯ ಸ್ವಾಮಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ನಂತರ ಪ್ರಸಾದವನ್ನು ಸ್ವೀಕರಿಸಿ ಪುನೀತರಾದರು.