ತುಮಕೂರು : ಅದ್ದೂರಿಯಾಗಿ ಜರುಗಿದ ಶೆಟ್ಟಿಹಳ್ಳಿ ಆಂಜನೇಯ ಸ್ವಾಮಿ ರಥೋತ್ಸವ

ತುಮಕೂರು :

ಇಂದು ಕಲ್ಪತರು ನಾಡು ತುಮಕೂರಿನ ಹೊರವಲಯದಲ್ಲಿರುವ ಇತಿಹಾಸ ಪ್ರಸಿದ್ಧ ಶೆಟ್ಟಿಹಳ್ಳಿ ಶ್ರೀ ಆಂಜನೇಯಸ್ವಾಮಿಯ ಬ್ರಹ್ಮರಥೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಪ್ರತಿ ವರ್ಷದಂತೆ ರಾಮನವಮಿ ಕಳೆದು ಒಂದು ವಾರದ ಬಳಿಕ ಈ ಜಾತ್ರೆ ನಡೆದಿದ್ದು, ರಾಜ್ಯದ ಮೂಲೆಮೂಲೆಯಿಂದ ಆಗಮಿಸಿದ ಭಕ್ತಾದಿಗಳು ಈ ರಥೋತ್ಸವವನ್ನು ಕಣ್ತುಂಬಿಕೊಂಡರು.

ಇಂದು ಸರಿ ಸುಮಾರು ಮಧ್ಯಾಹ್ನ 1 ಗಂಟೆಯ ವೇಳೆ ಆಗಸದಲ್ಲಿ ಗರುಡ ಪ್ರದಕ್ಷಿಣೆಯ ನಂತರ ಸಕಲ ವಿಧಿ ವಿಧಾನಗಳೊಂದಿಗೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಆಂಜನೇಯ ಸ್ವಾಮಿಯ ಬ್ರಹ್ಮರಥೋತ್ಸವ ಜರುಗಿತು. ನೂರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಶೆಟ್ಟಿಹಳ್ಳಿ ಆಂಜನೇಯಸ್ವಾಮಿಯ ರಥೋತ್ಸವದ ಅಂಗವಾಗಿ ಇಂದ್ರಜಿತು ಉತ್ಸವ, ಕಲ್ಯಾಣೋತ್ಸವ, ಗಜೇಂದ್ರ ಮೋಕ್ಷ ಕಲ್ಯಾಣೋತ್ಸವಗಳು ನಡೆದಿದ್ದು, ಇಂದು ಬ್ರಹ್ಮರಥೋತ್ಸವ ಜರುಗಿತು. ಈ ವೇಳೆ ಸಾವಿರಾರು ಭಕ್ತರು ರಥೋತ್ಸವದ ಬಳಿ ಉರುಳು ಸೇವೆ ಮಾಡುವ ಮೂಲಕ ತಮ್ಮ ತಮ್ಮ ಹರಕೆಗಳನ್ನು ಸಲ್ಲಿಸಿದರು.

ರಥೋತ್ಸವ ಹಿನ್ನೆಲೆ ಇಂದು ಮುಂಜಾನೆಯಿಂದಲೇ ಆಂಜನೇಯ ಸ್ವಾಮಿಗೆ ಸುಪ್ರಭಾತ ಸೇವೆ, ಪಂಚಾಮೃತ ಅಭಿಷೇಕ ಸೇರಿ ನಾನಾ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು. ಇನ್ನು ದೇಗುಲ ಹಾಗೂ ರಥಕ್ಕೆ ಹಲವು ಬಗೆಯ ಹೂಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಬಳಿಕ ಮಧ್ಯಾಹ್ನ ಸಾವಿರಾರು ಭಕ್ತರ ಸಮ್ಮುಖದಲ್ಲಿ ಉತ್ಸವ ಮೂರ್ತಿಯ ಮೆರವಣಿಗೆಯೊಂದಿಗೆ ಕರೆತಂದು ಬ್ರಹ್ಮರಥಕ್ಕೆ ಕೂರಿಸಲಾಯಿತು. ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತಿದ್ದ ಭಕ್ತರು ಶ್ರದ್ಧಾ ಭಕ್ತಿಯಿಂದ ರಥವನ್ನೆಳೆದರು. ರಥ ಎಳೆಯುತ್ತಿದ್ದಂತೆ ಭಕ್ತರು ಬಾಳೆಹಣ್ಣು, ದವನ ಎಸೆದು ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡರು. ಮಂಗಳವಾದ್ಯ ಸೇರಿದಂತೆ ವಿವಿಧ ಜಾನಪದ ವಾಧ್ಯಗಳು ರಥೋತ್ಸವಕ್ಕೆ ಮೆರಗು ನೀಡಿದವು. ಭಕ್ತರು ಭಕ್ತಿ ಭಾವದಿಂದ ಆಂಜನೇಯ ಸ್ಮರಣೆ ಮಾಡಿದರು.

ಇನ್ನು ರಥೋತ್ಸವದಲ್ಲಿ ಹನುಮನ ವೇಷಧಾರಿ ವಿಶೇಷ ಆಕರ್ಷಣೆಯಾಗಿದ್ರು. ಭಕ್ತರು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ರು. ಇನ್ನು ಕೆಲವು ಆರ್‌ಸಿಬಿ ಅಭಿಮಾನಿಗಳು ಇಲ್ಲಿಯೂ ತಮ್ಮ ಅಭಿಮಾನವನ್ನ ತೋರಿಸಿದ್ರು. ಬಾಳೆಹಣ್ಣಿನ  ಮೇಲೆ RCB ಎಂದು ಬರೆದು ರಥದತ್ತ ಎಸೆದು, ಜೈ ಆರ್‌ಸಿಬಿ ಅಂತಾ ಘೋಷಣೆ ಕೂಗಿದ್ರು. ಬಳಿಕ ಜೈ ಶ್ರೀರಾಮ್‌, ಜೈ ಹನುಮಾನ್‌ ಅನ್ನೋ ಘೋಷಣೆಗಳು ಕೂಡ ಮೊಳಗಿದ್ವು.

ಇನ್ನು ರಥೋತ್ಸವಕ್ಕೆ ಬಂದಿದ್ದ ಸಾವಿರಾರು ಭಕ್ತರಿಗೆ ದಾಸೋಹ ವ್ಯವಸ್ಥೆಯನ್ನು ಕೂಡ ಮಾಡಲಾಗಿತ್ತು. ಬಿಸಿಲಿನ ಝಳಕಕ್ಕೆ ಬಸವಳಿದಿದ್ದ ಭಕ್ತರಿಗೆ ಮಜ್ಜಿಗೆ, ಪಾನಕವನ್ನು ವಿತರಿಸಲಾಯಿತು.

Author:

share
No Reviews