ತುಮಕೂರು :
ಈ ಬಾರಿ ಯುಗಾದಿ ಹಬ್ಬ ಮತ್ತು ರಂಜಾನ್ ಎರಡೂ ಕೂಡ ಒಟ್ಟೊಟ್ಟಿಗೆ ಬಂದಿವೆ. ಹೀಗಾಗಿ ಸಾಲುಸಾಲು ರಜೆಗಳು ಬಂದಿದ್ದು ಕೆಲಸಕ್ಕಾಗಿ ಊರು ಬಿಟ್ಟು ಊರಿಗೆ ಬಂದಿದ್ದೋರು ತಮ್ಮ ಊರುಗಳತ್ತ ಮುಖ ಮಾಡ್ತಿರೋದ್ರಿಂದ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಯುಗಾದಿ ಮತ್ತು ರಂಜಾನ್ ಹಿನ್ನೆಲೆ ಹೆಚ್ಚುವರಿ ಬಸ್‌ಗಳನ್ನ ಬಿಟ್ಟಿರುವುದಾಗಿ ಸಾರಿಗೆ ಇಲಾಖೆ ಹೇಳಿಕೊಂಡಿತ್ತು. ಆದರೆ ಸರಿಯಾದ ಸಮಯಕ್ಕೆ ಬಸ್‌ಗಳೇ ಸಿಗದೇ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ಪರದಾಡುತ್ತಿರುವ ದೃಶ್ಯ ತುಮಕೂರಿನ ದೇವರಾಜ ಅರಸು ಬಸ್ ನಿಲ್ದಾಣದಲ್ಲಿ ಕಂಡುಬಂತು.
ಮುಂದಿನ ಎರಡು ಮೂರು ದಿನಗಳ ಕಾಲ ರಜೆ ಇರೋದರಿಂದ ಇವತ್ತು ತುಮಕೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ತುಂಬಿಹೋಗಿದ್ದರು. ತಮ್ಮ ತಮ್ಮ ಊರುಗಳಿಗೆ ತೆರಳು ಬಂದಿದ್ದ ಪ್ರಯಾಣಿಕರು ಸರಿಯಾದ ಸಮಯಕ್ಕೆ ಬಸ್‌ಗಳು ಸಿಗದೇ ಪರದಾಡಿದ್ರು. ಇನ್ನು ಶಾಲಾ, ಕಾಲೇಜುಗಳನ್ನ ಮುಗಿಸಿ ಮನೆಗೆ ಹೊರಟಿದ್ದ ವಿದ್ಯಾರ್ಥಿಗಳು ಕೂಡ ತೊಂದರೆ ಅನುಭವಿಸುವಂತಾಯಿತು. ಗಂಟೆಗಟ್ಟಲೇ ಕಾದರೂ ಕೂಡ ಬಸ್ ಸಿಗದೇ ಒದ್ದಾಡಿದರು. ಬಸ್ ಗಳು ಬಂದರೂ ಕೂಡ ಸೀಟ್ ಇರಲಿಲ್ಲ. ಬಸ್ ಹತ್ತುವುದಕ್ಕೂ ಸಹ ನೂಕುನುಗ್ಗಲಿನ ವಾತಾವರಣ ಸೃಷ್ಟಿಯಾಗಿತ್ತು.
ಸರಿಯಾದ ಸಮಯಕ್ಕೆ ಬಸ್ ಸಿಗದ ಕಾರಣ ವಯಸ್ಸಾದವರಂತೂ ಬಹಳಷ್ಟು ತೊಂದರೆ ಅನುಭವಿಸುವಂತಾಯ್ತು. ಈ ಬಗ್ಗೆ ಮಾತನಾಡಿದ ಪ್ರಯಾಣಿಕರು, ನಾವು ಬಸ್ ನಿಲ್ದಾಣಕ್ಕೆ ಬಂದು ಗಂಟೆಗಟ್ಟಲೇ ಕಾದರೂ ಬಸ್‌ಗಳೇ ಬರುತ್ತಿಲ್ಲ. ಬಂದಂತಹ ಬಸ್‌ಗಳು ಫುಲ್ ಆಗ್ತಿದ್ದು, ಮತ್ತೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ತುಮಕೂರಿನಲ್ಲಿ ಡಿಪೋ ಇದ್ದರೂ ಸಹ ಹೆಚ್ಚುವರಿ ಬಸ್‌ಗಳನ್ನು ಬಿಟ್ಟಿಲ್ಲ. ಇದರಿಂದ ಪ್ರಯಾಣಿಕರಿಗೆ ತುಂಬಾ ತೊಂದರೆ ಉಂಟಾಗುತ್ತಿದೆ. ಸರ್ಕಾರ ಈ ಕೂಡಲೇ ಎಲ್ಲ ಡಿಪೋಗಳಲ್ಲಿ ಹೆಚ್ಚುವರಿ ಬಸ್‌ಗಳನ್ನ ಬಿಡಲು ಆದೇಶ ಮಾಡಬೇಕು. ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿದರು.
ಸರ್ಕಾರ ಬಿಟ್ಟಿ ಭಾಗ್ಯಗಳನ್ನು ಕೊಟ್ಟು ಜನಸಾಮಾನ್ಯರಿಗೆ ತುಂಬಾ ತೊಂದರೆ ಉಂಟು ಮಾಡುತ್ತಿದೆ. ಬಸ್ ಗಳಲ್ಲಿ ಓಡಾಡುವುದಕ್ಕೂ ಕೂಡ ಯೋಚನೆ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹಿರಿಯರಿಗೆ , ವಯೋ ವೃದ್ಧರಿಗೆ ಸೀಟ್ ಗಳು ಸಿಗುತ್ತಿಲ್ಲ. ಎಲ್ಲಿ ನೋಡಿದರೂ ಸಹ ಶಕ್ತಿ ಯೋಜನೆಯಲ್ಲಿ ಓಡಾಡುವ ಮಹಿಳೆಯರು ತುಂಬಿದ್ದಾರೆ. ಸರ್ಕಾರ ಈ ಕೂಡಲೇ ಶಕ್ತಿ ಯೋಜನೆಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಒಟ್ಟಿನಲ್ಲಿ ಹಬ್ಬದ ಹಿನ್ನೆಲೆಯಲ್ಲಿ ಬಸ್‌ಗಳೆಲ್ಲಾ ತುಂಬಿ ತುಳುಕುತ್ತಿವೆ. ಸರಿಯಾದ ಸಮಯಕ್ಕೆ ಬಸ್ ಕೂಡ ಸಿಗದೇ ಪ್ರಯಾಣಿಕರು ಪರದಾಡುವಂತಾಗಿದೆ. ಈ ಬಗ್ಗೆ ಕೂಡಲೇ ಸರ್ಕಾರ ಕ್ರಮ ವಹಿಸಬೇಕಾಗಿದೆ.