ತುಮಕೂರು :
ತುಮಕೂರು ನಗರದ ಅಂದರೆ ಕೇವಲ ಸ್ಮಾರ್ಟ್ ಸಿಟಿ, ಶೈಕ್ಷಣಿಕ ನಗರ ಅಂತಾ ಮಾತ್ರ ಅಲ್ಲ ಗಾರ್ಬೇಜ್ ಸಿಟಿ ಅಂತಾನೇ ಫೇಮಸ್ ಆಗ್ತಾ ಇದೆ. ಕಸದ ಸಮಸ್ಯೆಯಿಂದ ನಗರದ ಸೌಂದರ್ಯ ಹಾಳಾಗ್ತಾ ಇದ್ದು, ಕ್ಲೀನ್ ಮಾಡಿಸುವ ಕೆಲಸಕ್ಕೆ ಮಾತ್ರ ಪಾಲಿಕೆ ಸಿಬ್ಬಂದಿ ಮುಂದಾಗ್ತಾ ಇಲ್ಲ. ಒಂದುಕಡೆ ಅಭಿವೃದ್ಧಿ ಕೆಲಸ ಆಗ್ತಾ ಇದ್ದರು, ಅಭಿವೃದ್ಧಿ ಕೆಲಸದ ಜೊತೆ ಜೊತೆಗೆ ಕಸಕ್ಕೆ ಮುಕ್ತಿ ಇಲ್ಲವಾಗಿದ್ದು, ತುಮಕೂರು ನಗರ ಗಾರ್ಬೇಜ್ ಸಿಟಿ ಅಂತಾ ಹಣೆಪಟ್ಟಿ ಪಡೆದುಕೊಳ್ತಾ ಇದೆ.
ನಗರದ ಶೆಟ್ಟಿಹಳ್ಳಿ ಮುಖ್ಯರಸ್ತೆಯ ಫುಟ್‌ಪಾತ್‌ನಲ್ಲಿ ವ್ಯಾಪಾರ ಮಾಡ್ತಾ ಇದ್ದ ವ್ಯಾಪಾರಸ್ಥರನ್ನು ಪಾಲಿಕೆ ಕಳೆದ 15 ದಿನಗಳ ಹಿಂದೆ ಖಾಲಿ ಮಾಡಿಸಿ, ಜನರ ಓಡಾಟಕ್ಕೆ ಅನುಕೂಲ ಮಾಡಿಕೊಡಲಾಗಿತ್ತು. ಜೊತೆಗೆ ಫುಟ್‌ಪಾತ್ ಪಕ್ಕದಲ್ಲಿದ್ದ ಚರಂಡಿಯನ್ನು ಕೂಡ ಕ್ಲೀನ್ ಮಾಡಿಸಿದ್ದರು. ಇದರಿಂದ ಫುಟ್ಪಾತ್ ಇನ್ಮೇಲೆ ಸ್ವಚ್ಛವಾಗಿರುತ್ತೆ, ನಾವು ವಾಕ್ ಮಾಡಬಹುದು ಎಂಬ ಸಂತಸದಲ್ಲಿದ್ದ ಜನರಿಗೆ ಪಾಲಿಕೆ ಶಾಕ್ ನೀಡಿದೆ. ಚರಂಡಿಯಲ್ಲಿದ್ದ ಕಸವನ್ನು ಫುಟ್‌ಪಾತ್ ನಲ್ಲೇ ಪಾಲಿಕೆ ಸಿಬ್ಬಂದಿ ಬಿಟ್ಟು ಹೋಗಿದ್ದಾರೆ. ಇದರಿಂದ ಕಸ ಸುಮಾರು ಒಂದು ವಾರದಿಂದ ಕೊಳೆತು ದುರ್ನಾತ ಬೀರುತ್ತಿದೆ. ಜೊತೆಗೆ ಫುಟ್‌ಪಾತನಲ್ಲಿ ಓಡಾಡಲು ಜಾಗ ಬಿಡದಷ್ಟು ಕಸದಿಂದ ಪಾದಚಾರಿಗಳ ಓಡಾಟ ಕಷ್ಟವಾಗ್ತಿದೆ. ಜೊತೆಗೆ ಹೇಗೋ ಕಸ ಇದೆ ಅಂತಾ ಅಕ್ಕ ಪಕ್ಕದ ನಿವಾಸಿಗಳು ಕಸವನ್ನು ತಂದು ಸುರಿಯುವ ಕೆಲಸ ಮಾಡ್ತಾ ಇದ್ದಾರೆ,
ಫುಟ್‌ಪಾತ್‌ನಲ್ಲಿದ್ದ ವ್ಯಾಪಾರಸ್ಥರನ್ನು ಸ್ಥಳಾಂತರ ಮಾಡಿದ್ದಕ್ಕೆ ಸ್ಥಳೀಯ ನಿವಾಸಿಗಳು ಖುಷಿಯಾಗಿದ್ದರು. ಆದರೆ ಅಂದುಕೊಂಡಿದ್ದು ಒಂದು ಆಗಿದ್ದೇ ಒಂದು ಎಂಬಂತಾಗಿದೆ, ಚರಂಡಿಯಲ್ಲಿದ್ದ ಕಸವನ್ನು ಹೊರತೆಗೆದು, ವಿಲೇವಾರಿ ಮಾಡದೇ ಅಲ್ಲಿಯೇ ಬಿಟ್ಟು ಪಾಲಿಕೆ ಸಿಬ್ಬಂದಿ ನಿರ್ಲಕ್ಷ್ಯವಹಿಸಿದೆ ಇದರಿಂದ ವಾಸನೆಯಲ್ಲಿಯೇ ಓಡಾಡುವ ದುಸ್ಥಿತಿ ಇದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕ್ತಿದ್ದಾರೆ.
ಇನ್ನಾದರೂ ಪಾಲಿಕೆ ಅಧಿಕಾರಿಗಳು ಇತ್ತ ಗಮನ ಹರಿಸಿ, ಫುಟ್‌ಪಾತ್‌ನಲ್ಲಿದ್ದ ಕಸದ ಸಮಸ್ಯೆಗೆ ಮುಕ್ತಿ ಕೊಡ್ತಾರೋ ಅಥವಾ ಕಸ ಇದ್ರು ಕೇರ್ ಮಾಡದೇ ಕಣ್ಣಿದ್ದು ಕುರುಡರಂತೆ ವರ್ತಿಸ್ತಾರೋ ಕಾದುನೋಡಬೇಕಿದೆ.