ತುಮಕೂರು:
ಅಮೆರಿಕಾದಲ್ಲಿ ಅಕ್ರಮ ಭಾರತೀಯ ವಲಸಿಗರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಇಂದು ತುಮಕೂರಿನಲ್ಲಿ ಜಿಲ್ಲಾ ಕಾಂಗ್ರೆಸ್ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ತುಮಕೂರು ಜಿಲ್ಲಾ ಕಾಂಗ್ರೆಸ್ ಘಟಕದ ಮುಖಂಡರು ಸೇರಿ ಹಲವಾರು ಮಂದಿ ಕಾರ್ಯಕರ್ತರು ಭಾಗಿಯಾಗಿದ್ದು, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.
ನಗರದ ಡಿಸಿ ಕಚೇರಿ ಮುಂದೆ ಜಮಾಯಿಸಿದ ನೂರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿ, ಕೇಂದ್ರ ಸರ್ಕಾರ ಅಮೆರಿಕಾದಲ್ಲಿರೋ ಭಾರತೀಯರ ಮೇಲೆ ನಿರ್ಲಕ್ಷ್ಯ ತೋರಿಸುತ್ತಿದ್ದು, ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಅಮೆರಿಕಾ ಸರ್ಕಾರ ಭಾರತೀಯರನ್ನು ಅನಾಗರಿಕ ರೀತಿಯಲ್ಲಿ ಗಡಿಪಾರು ಮಾಡುತ್ತಿದೆ. ನಮ್ಮ ಪ್ರಜೆಗಳನ್ನು ರಕ್ಷಿಸುವ ಜವಾಬ್ದಾರಿ ಕೇಂದ್ರ ಸರ್ಕಾರದ ಮೇಲಿದೆ, ಆದರೆ ಇದುವರೆಗೆ ಒಂದು ವಿಮಾನ ವ್ಯವಸ್ಥೆಯನ್ನೂ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಮಾತನಾಡಿದ ಮುರಳೀಧರ್ ಹಾಲಪ್ಪ, ಅಮೆರಿಕಾದಲ್ಲಿರೋ ಭಾರತೀಯರ ಕೈ ಕಾಲಿಗೆ ಬೇಡಿಗಳನ್ನು ಹಾಕಿ ಅಮಾನವೀಯವಾಗಿ ಗಡಿಪಾರು ಮಾಡಲಾಗ್ತಿದೆ. ಕೂಡಲೇ ಕೇಂದ್ರ ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡು ಭಾರತೀಯರನ್ನು ಗೌರವಯುತವಾಗಿ ಕರೆದುಕೊಂಡು ಬರಬೇಕಿದೆ ಎಂದರು.