ತುಮಕೂರು :
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರಂತರವಾಗಿ ಬೆಲೆ ಏರಿಕೆಯನ್ನು ಮಾಡುತ್ತಲೇ ಬರುತ್ತಿದ್ದು, ಇವತ್ತು ಬೆಲೆ ಏರಿಕೆಯನ್ನು ವಿರೋಧಿಸಿ ಕಮ್ಯುನಿಸ್ಟರು ತುಮಕೂರಿನಲ್ಲಿ ಬೀದಿಗಿಳಿದರು. ಬೆಲೆ ಏರಿಕೆಯನ್ನು ಖಂಡಿಸಿ ತುಮಕೂರು ಜಿಲ್ಲೆಯ ಸಿಪಿಐ (ಎಂ) ಘಟಕದ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಟೌನ್ ಹಾಲ್ ಸರ್ಕಲ್ ಎದುರು ಜಮಾಯಿಸಿದ ಸಿಪಿಐ (ಎಂ )ಕಾರ್ಯಕರ್ತರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರವು ಈಗಾಗಲೇ ಪೆಟ್ರೋಲ್ ಡೀಸೆಲ್ ಮೇಲೆ ತೆರಿಗೆ ಹಾಕಿ ಜನಸಾಮಾನ್ಯರ ಮೇಲೆ ಹೊರೆ ಹಾಕುತ್ತಿವೆ. ಆದರೆ ಜನರ ಆದಾಯವನ್ನು ಹೆಚ್ಚಳ ಮಾಡುವಂತಹ ಯಾವುದೇ ಕೆಲಸಗಳನ್ನು ಸರ್ಕಾರಗಳು ಮಾಡುತ್ತಿಲ್ಲ . ಸಚಿವರ, ಶಾಸಕರ ಹಾಗೂ ಸಂಸದರ ಸಂಬಳಗಳನ್ನು ಮಾತ್ರ ಯಾವುದೇ ಚರ್ಚೆ ಇಲ್ಲದೆಯೇ ಹೆಚ್ಚಳ ಮಾಡಿಕೊಂಡಿದ್ದಾರೆ. ಆದರೆ ತೆರಿಗೆ ಕಟ್ಟುವಂತಹ ಜನಸಾಮಾನ್ಯರು ಬಡತನ ಅನುಭವಿಸುತ್ತಿದ್ದಾರೆ. ಅವರ ಕೂಲಿಗಳಲ್ಲಿ ಏರಿಕೆ ಆಗ್ತಿಲ್ಲ. ಹೀಗಾಗಿ ಕರ್ನಾಟಕ ಸರ್ಕಾರ ಹಾಲು, ಮೊಸರು, ವಿದ್ಯುತ್ ದರದ ಏರಿಕೆಯ ನಿರ್ಧಾರವನ್ನು ವಾಪಸ್ ಪಡೆಯಬೇಕು. ಅದೇ ರೀತಿ ಕೇಂದ್ರ ಸರ್ಕಾರ ಕೂಡ ಅಡುಗೆ ಅನಿಲ ಹಾಗೂ ಟೋಲ್ ದರ ಹೆಚ್ಚಳ ಮಾಡಿ ಜನ ಸಾಮಾನ್ಯರ ಮೇಲೆ ಹೊರೆ ಹಾಕಿದೆ. ಅದನ್ನು ಕೂಡ ಕೇಂದ್ರ ಸರ್ಕಾರ ವಾಪಸ್ ಪಡೆಯಬೇಕು ಎಂದು ಸಿಪಿಐ ಎಮ್ ಕಾರ್ಯಕರ್ತರು ಒತ್ತಾಯಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನ ಬಳಸುವ ಅಗತ್ಯ ವಸ್ತುಗಳ ಬೆಲೆ ಏರಿಸುವಲ್ಲಿ ಪೈಪೋಟಿ ಮಾಡುತ್ತಿವೆ. ಕೇಂದ್ರ ಹಾಗೂ ರಾಜ್ಯ ಎರಡೂ ಸರ್ಕಾರಗಳಲ್ಲಿ ವ್ಯತ್ಯಾಸ ಕಾಣಿಸುತ್ತಿಲ್ಲ. ವಿಪರ್ಯಾಸ ಅಂದರೆ ಕರ್ನಾಟಕ ರಾಜ್ಯದಲ್ಲಿ ಬೆಲೆ ಏರಿಕೆ ವಿರುದ್ದ ಬಿಜೆಪಿ ಹೊರಾಟ ಮಾಡುತ್ತಿದೆ. ಕಾಂಗ್ರೆಸ್ ನವರು ಬಿಜೆಪಿ ಮಾಡುತ್ತಿರುವ ಬೆಲೆ ಏರಿಕೆ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದಾರೆ. ನಾವು ಎರಡೂ ಸರ್ಕಾರಗಳು ಬೆಲೆ ಏರಿಕೆ ಮಾಡುತ್ತಿರೋದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಇನ್ನು ಜೆಡಿಎಸ್‌ನವರು ಕೇಂದ್ರದಲ್ಲಿ ಬಿಜೆಪಿಗೆ ಬೆಂಬಲ ಕೊಟ್ಟಿದ್ರು ಕೂಡ ಬೆಲೆ ಏರಿಕೆ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಇನ್ನು ದಕ್ಷಿಣ ಭಾರತದ ರಾಜ್ಯಗಳಿಗೆ ಅವರ ತೆರಿಗೆಯ ಪಾಲು ಸಮರ್ಪಕವಾಗಿ ಬಾರದೇ ಇರೋದರಿಂದ ಬಿಜೆಪಿಯೇತರ ಪಕ್ಷಗಳು ಆಡಳಿತ ಮಾಡುವಂತಹ ರಾಜ್ಯಗಳಲ್ಲಿ ವಿಪರೀತವಾದ ಆರ್ಥಿಕ ಸಂಕಷ್ಟಕ್ಕೆ ತುತ್ತಾಗುವಂತಹ ಸ್ಥಿತಿಯನ್ನು ಕೇಂದ್ರ ಸರ್ಕಾರ ನಿರ್ಮಿಸುತ್ತಿದೆ. ಎಲ್ಲಾ ಬೆಲೆ ಏರಿಕೆಗೂ ಕೂಡ ಕೇಂದ್ರ ಸರ್ಕಾರವೇ ಸಂಪೂರ್ಣ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಡವರ ಮೇಲೆ ಹೊರೆ ಏರುವಂತಹ ಈ ನೀತಿಗಳನ್ನು ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಾಪಸ್ ಪಡೆಯಬೇಕು. ಹಾಗೂ ಎಲ್ಲಾ ಬೆಲೆ ಏರಿಕೆಯನ್ನೂ ಸಹ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.