ತುಮಕೂರು :
ಪ್ರಜಾಶಕ್ತಿ ಪ್ರಾರಂಭವಾದ ದಿನದಿಂದಲೂ ಜನರ ನಾಡಿಮಿಡಿತವಾಗಿ ಕೆಲಸ ಮಾಡ್ತಾನೆ ಬಂದಿದೆ. ಅಧಿಕಾರಿಗಳ ಕಣ್ಣಿಗೆ ಸಣ್ಣ ಸಮಸ್ಯೆ ಅಂತಾ ಕಂಡು ಬಂದರೂ, ಆ ಸಣ್ಣ ಸಮಸ್ಯೆ ಜನರಿಗೆ ದೊಡ್ಡ ಸಮಸ್ಯೆಯಾಗಿರುತ್ತೆ. ಅದರಂತೆ ಆ ಸಮಸ್ಯೆಗಳಿಂದ ಕೆಲವೊಮ್ಮೆ ಅದೆಷ್ಟೋ ಸಾವು - ನೋವುಗಳನ್ನು ಕೂಡ ತಂದೊಡ್ಡುವ ಸ್ಥಿತಿ ಇತ್ತು. ಹೀಗಾಗಿ ನಿಮ್ಮ ಪ್ರಜಾಶಕ್ತಿ ಸಣ್ಣ ಸಮಸ್ಯೆ ಆಗಲಿ ದೊಡ್ಡ ಸಮಸ್ಯೆ ಆಗಲಿ ಆ ಸಮಸ್ಯೆಗಳ ಸುದ್ದಿಯನ್ನು ವರದಿ ಪ್ರಸಾರ ಮಾಡುವ ಮೂಲಕ ಅಧಿಕಾರಿಗಳ ಕಣ್ತೆರೆಸುವ ಕೆಲಸವನ್ನು ಮಾಡ್ತಾ ಬಂದಿದೆ. ಅದರಂತೆ ತುಮಕೂರು ನಗರದ ಊರುಕೆರೆ ಭಾಗದಲ್ಲಿ ಸವಾರರಿಗೆ ಯಮ ಸ್ವರೂಪಿಯಾಗಿ ಸ್ಪೀಡ್ ಬ್ರೇಕರ್‌ಗಳಿದ್ದು, ಪ್ರಯಾಣಿಕರ ಪ್ರಾಣಕ್ಕೆ ಕುತ್ತು ತರುತ್ತಿತ್ತು. ಹೀಗಾಗಿ ಈ ಬಗ್ಗೆ ನಿಮ್ಮ ಪ್ರಜಾಶಕ್ತಿ ವರದಿ ಮಾಡಿದ್ದು, ವರದಿ ಬಿತ್ತರವಾಗಿ ಕೇವಲ ಮೂರ್ನಾಲ್ಕು ದಿನಗಳಲ್ಲಿ ಹೆದ್ಧಾರಿ ಪ್ರಾಧಿಕಾರ ಎಚ್ಚೆತ್ತುಕೊಂಡಿದೆ.
ತುಮಕೂರು ನಗರದ ಹೊರವಲಯದ ಊರುಕೆರೆ ಬಳಿಯ ಬೆಂಗಳೂರು- ಪುಣೆ ಹೆದ್ಧಾರಿಯಲ್ಲಿ ಅಪಾಯಕಾರಿ ಸ್ಪೀಡ್ ಬ್ರೇಕರ್‌ಗಳನ್ನು ಅಳವಡಿಸಲಾಗಿದ್ದು, ಈ ಸ್ಪೀಡ್ ಬ್ರೇಕರ್‌ಗಳಿಂದ ಸವಾರರ ಪ್ರಾಣಕ್ಕೆ ಆಪತ್ತು ಎದುರಾಗಿತ್ತು. ಸ್ಪೀಡ್ ಬ್ರೇಕರ್ ಇದೆ ಎಂದು ತಿಳಿಸಲು ಯಾವುದೇ ಸೂಚನ ಫಲಕ ಇರಲಿಲ್ಲ. ಇದರಿಂದ ವೇಗವಾಗಿ ಬರೋ ಗಾಡಿಗಳು ಅಪಘಾತಕ್ಕೀಡಾಗುತ್ತಿದ್ದವು. ಈ ಬಗ್ಗೆ ನಿಮ್ಮ ಪ್ರಜಾಶಕ್ತಿ ಟಿವಿಯಲ್ಲಿ ಯಮಸ್ವರೂಪಿ ಸ್ಪೀಡ್ ಬ್ರೇಕರ್ ಎಂಬ ಶೀರ್ಷಿಕೆಯಡಿಯಲ್ಲಿ ಸುದ್ದಿ ಮಾಡಿತ್ತು. ಸುದ್ದಿ ಪ್ರಸಾರ ಆಗ್ತಿದ್ದಂತೆ ಎಚ್ಚೆತ್ತ ಹೆದ್ದಾರಿ ಪ್ರಾಧಿಕಾರ ಸ್ಪೀಡ್ ಬ್ರೇಕರ್ ಇರುವ ಜಾಗದಲ್ಲಿ ಸೂಚನ ಫಲಕ ಹಾಗೂ ಸಿಗ್ನಲ್‌ಗಳನ್ನು ಅಳವಡಿಸುವ ಕೆಲಸವನ್ನು ಮಾಡಿದೆ. ಇದರಿಂದ ಸವಾರರಿಗೆ ಮುಂದೆ ಸ್ಪೀಡ್ ಬ್ರೇಕರ್‌ಗಳಿವೆ, ನಿಧಾನವಾಗಿ ಚಲಿಸಿ ಎಂದು ತಿಳಿಸಿಕೊಡಲಿದ್ದು, ಸವಾರರು ಎಚ್ಚರದಿಂದ ವಾಹನ ಚಲಾಯಿಸಲು ಅನುಕೂಲ ಮಾಡಿಕೊಟ್ಟಂತಾಗಿದೆ. ಇದರಿಂದ ಸಾವಿರಾರು ಪ್ರಯಾಣಿಕರ ಜೀವ ಉಳಿಸುವ ಕೆಲಸ ಆದಂತಾಗಿದೆ.