ತುಮಕೂರು :
ಪೊಲೀಸರ ದಕ್ಷ ಕಾರ್ಯಾಚರಣೆಯಿಂದ ಕೇವಲ 48 ಗಂಟೆಗಳಲ್ಲೇ ಖದೀಮನನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು ವೃದ್ಧೆಯನ್ನು ಹೆದರಿಸಿ 51 ಗ್ರಾಂ ತೂಕದ 4 ಚಿನ್ನದ ಸರವನ್ನು ಸುಲಿಗೆ ಮಾಡಿ ಎಸ್ಕೇಪ್ ಆಗಿದ್ದ ಖದೀಮನನ್ನು ಪ್ರಕರಣ ದಾಖಲಾದ 48 ಗಂಟೆಗಳಲ್ಲಿ ಬಂಧಿಸುವಲ್ಲಿ ಚೇಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಮನೋಜ್ ಅಲಿಯಾಸ್ ಮಂಜುನಾಥ್ ಬಂಧಿತ ಆರೋಪಿಯಾಗಿದ್ದಾನೆ. ಈ ಖದೀಮ ಡ್ರೈವರ್ ಕೆಲಸ ಮಾಡಿಕೊಂಡಿದ್ದು , ಗುಬ್ಬಿ ತಾಲೂಕಿನ ಚೇಳೂರು ಹೋಬಳಿಯ ಮಾದೇನಹಳ್ಳಿ ಗ್ರಾಮದ ನಿವಾಸಿ ಎಂದು ಹೇಳಲಾಗುತ್ತಿದೆ.
ಕಳೆದ ಶುಕ್ರವಾರ ಅಂದರೆ ಏಪ್ರಿಲ್ 11 ರಂದು ಮಧ್ಯಾಹ್ನದ ಸುಮಾರಿಗೆ ಹೊಸಕೆರೆ ಗ್ರಾಮದ 75 ವರ್ಷದ ವೃದ್ಧೆ ರಾಜಲಕ್ಷ್ಮೀ, ರಸ್ತೆಯಲ್ಲಿ ನಡೆದುಕೊಂಡು ಹೋಗ್ತಾ ಇದ್ದರು. ಈ ವೇಳೆ ಡ್ರಾಪ್ ಮಾಡುತ್ತೇನೆ ಎಂದು ವೃದ್ಧೆಯನ್ನು ಕರೆದುಕೊಂಡು ಹೋದ ಐನಾತಿ ಖದೀಮ ಶಿವೇನಹಳ್ಳಿ ಕೆರೆ ಏರಿಯ ಸಮೀಪ ಅಜ್ಜಿಯನ್ನು ಹೆದರಿಸಿ, ಕೊರಳಲ್ಲಿದ್ದ 4 ಚಿನ್ನದ ಸರಗಳನ್ನು ಕಸಿದುಕೊಂಡು ಎಸ್ಕೇಪ್ ಆಗಿದ್ದ, ಈ ಸಂಬಂಧ ಗುಬ್ಬಿ ತಾಲೂಕಿನ ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗಿ ಕೇವಲ 2 ದಿನಗಳಲ್ಲಿ ಆರೋಪಿಯನ್ನು ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಶಿರಾ ಉಪವಿಭಾಗದ ಡಿವೈಎಸ್ಪಿ ಶೇಖರ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಗುಬ್ಬಿ ವೃತ್ತ ನಿರೀಕ್ಷಕ ರಾಘವೇಂದ್ರ ರವರ ನೇತೃತ್ವದ ತಂಡದ ಚೇಳೂರು ಪಿಎಸ್ಐ ನಾಗರಾಜು ಪೊಲೀಸ್ ಸಿಬ್ಬಂದಿ ರವಿಕುಮಾರ್, ನಾಗಭೂಷಣ್, ಪದ್ಮನಾಭ, ಮಧುಸೂದನ್, ಚಾಲಕ ದೇವರಾಜಯ್ಯ ತಂಡದ ಕಾರ್ಯಾಚರಣೆಗೆ ಎಸ್ಪಿ ಅಶೋಕ್ ವೆಂಕಟ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.