ತುಮಕೂರು :
ನಾಳೆ ನಾಡಿನಾದ್ಯಂತ ಯುಗಾದಿ ಹಬ್ಬದ ಸಂಭ್ರಮ. ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಅನ್ನೋ ಹಾಡಿನಂತೆಯೇ ನಾಡಿನ ಜನ ಯುಗಾದಿ ಹಬ್ಬದ ಮೂಲಕ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಸಜ್ಜಾಗಿದ್ದಾರೆ. ಕಲ್ಪತರು ನಾಡು ತುಮಕೂರು ಜಿಲ್ಲೆಯ ಜನರಲ್ಲಿಯೂ ಯುಗಾದಿಯ ಸಂಭ್ರಮ ಮನೆ ಮಾಡಿದ್ದು, ಬೆಲೆ ಏರಿಕೆಯ ಬಿಸಿಯ ನಡುವೆಯೂ ಹೊಸ ಮನ್ವಂತರವನ್ನು ಸ್ವಾಗತಿಸಲು ಸಕಲ ಸಿದ್ಧತೆಯಲ್ಲಿ ತೊಡಗಿದ್ದಾರೆ.
ನಾಳೆ ಯುಗಾದಿ ಹಬ್ಬದ ಹಿನ್ನೆಲೆ ಇವತ್ತು ತುಮಕೂರಿನ ಹೊರವಲಯದಲ್ಲಿರುವ ಅಂತರಸನಹಳ್ಳಿ ಮಾರುಕಟ್ಟೆ ಜಾತ್ರೆಯಂತಾಗಿ ಬದಲಾಗಿತ್ತು. ಸುಡುಬಿಸಿಲಿನ ನಡುವೆಯೂ ನಗರದ ಜನರು ಹೂ, ಹಣ್ಣುಗಳನ್ನು ಖರೀದಿಸಲು ಮುಗಿಬಿದ್ದಿದ್ದರು. ಹೀಗಾಗಿ ಅಂಗಡಿ ಮುಂಗಟ್ಟುಗಳು ಗ್ರಾಹಕರಿಂದ ತುಂಬಿ ತುಳುಕುತ್ತಿದ್ದವು. ಕೇವಲ ನಗರದಿಂದ ಮಾತ್ರವಲ್ಲ, ಜಿಲ್ಲೆಯ ಬೇರೆ ಬೇರೆ ಊರು, ಹಳ್ಳಿಗಳಿಂದಲೂ ಆಗಮಿಸಿ ಹಬ್ಬದ ಸಾಮಗ್ರಿಗಳನ್ನು ಖರೀದಿ ಮಾಡಿದರು.
ಮಾವು ಮತ್ತು ಬೇವಿನ ಸೊಪ್ಪನ್ನು ತಂದು ರಸ್ತೆ ಬದಿಗಳಲ್ಲಿ ರಾಶಿ ಹಾಕಿ ಮಾರಾಟ ಮಾಡುವ ದೃಶ್ಯ ಕಂಡುಬಂತು. ಇವುಗಳ ಖರೀದಿ ಕೂಡ ಜೋರಾಗಿತ್ತು. ಜೊತೆಗೆ ಹಬ್ಬದ ಹಿನ್ನೆಲೆಯಲ್ಲಿ ಹೂವಿಗೆ ಬೇಡಿಕೆ ಹೆಚ್ಚಾಗಿತ್ತು. ಕನಕಾಂಬರ, ಮಲ್ಲಿಗೆ, ಗುಲಾಬಿ, ಸುಗಂಧರಾಜ, ಸೇವಂತಿಗೆ ಸೇರಿದಂತೆ ಹೂವಿನ ದರಗಳು ಗಗನಕ್ಕೇರಿದ್ದು, ಬೆಲೆ ಏರಿಕೆಯ ನಡುವೆಯೂ ಗ್ರಾಹಕರು ಹೂ, ಹಣ್ಣುಗಳನ್ನು ಖರೀದಿಸಿದರು.
ಇನ್ನು ಯುಗಾದಿ ಹಬ್ಬದಂದು ಉಡುದಾರ ಧರಿಸುವುದು ಕೂಡ ವಾಡಿಕೆ. ಹೀಗಾಗಿ ಉಡುದಾರಗಳ ಮಾರಾಟದ ದೃಶ್ಯವೂ ಕಂಡುಬಂತು. ಒಟ್ಟಿನಲ್ಲಿ ತುಮಕೂರಿನ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಯುಗಾದಿ ಹಬ್ಬಕ್ಕೆ ಖರೀದಿಯ ಭರಾಟೆ ಜೋರಾಗಿತ್ತು.