ತುಮಕೂರು: ತುಮಕೂರು ಜಿಲ್ಲೆಯಲ್ಲಿ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿ, ತುಮಕೂರು ಜಿಲ್ಲೆಯ ಬಿಜೆಪಿ ಶಾಸಕರಾದ ಬಿ. ಸುರೇಶ್ ಗೌಡ ಹಾಗೂ ಜಿ.ಬಿ. ಜ್ಯೋತಿಗಣೇಶ್ ಅವರು ಇಂದು ಪಕ್ಷದ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ದಿಲೀಪ್ ಕುಮಾರ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.
"ನಾವು ಕಳೆದ ಒಂದು ವರ್ಷದಿಂದ ಲಿಂಕ್ ಕೆನಾಲ್ ವಿರೋಧಿಸಿ ಹೋರಾಟ ಮಾಡುತ್ತಿದ್ದೇವೆ. ಜನರ ಹಕ್ಕಿಗಾಗಿ ಈ ಹೋರಾಟ ನಡೆಸುತ್ತಿದ್ದು, ಈಗ ಮತ್ತೆ ಈ ಕಾಮಗಾರಿ ಪ್ರಾರಂಭವಾಗಿದೆ ಎಂಬುದು ಖಂಡನೀಯ" ಎಂದರು. ಇದೇ ವೇಳೆ ಮಾತನಾಡಿದ ಶಾಸಕರು ಮೇ 26ರಂದು ಸಭೆ ಆಯೋಜಿಸಿ, ಹೋರಾಟದ ಮುಂದಿನ ಹಂತದ ಕುರಿತು ನಿರ್ಧಾರ ಕೈಗೊಳ್ಳುವುದಾಗಿ ಘೋಷಿಸಿದರು. ಅಲ್ಲದೇ "ರಾಜ್ಯದ ಹಿರಿಯ ನಾಯಕರ ಜೊತೆ ಚರ್ಚೆ ನಡೆಸಿ ಅಂತಿಮ ನಿರ್ಧಾರಕ್ಕೆ ಬರುವೆವೆ” ಎಂದರು.
"ಕೊನೆಯ ಅಸ್ತ್ರವಾಗಿ ಹೋರಾಟಕ್ಕೆ ಸಜ್ಜಾಗುತ್ತೇವೆ. ಯಾವುದೇ ಕಾರಣಕ್ಕೂ ಲಿಂಕ್ ಕೆನಾಲ್ ಮಾಡದಂತೆ ನಿಲ್ಲಿಸುತ್ತೇವೆ. ಇದು ನಮ್ಮ ಜಿಲ್ಲೆಯ ಹಕ್ಕು. ನಾವು ಪಕ್ಷಾತೀತವಾಗಿ ಹೋರಾಟ ಮಾಡುತ್ತೇವೆ" ಎಂದು ಅಕ್ರೋಶ ವ್ಯಕ್ತಪಡಿಸಿದರು.