ತುಮಕೂರು :
ತುಮಕೂರು ನಗರದ ಹೃದಯ ಭಾಗದಲ್ಲಿರೋ ಜೆ.ಸಿ ರಸ್ತೆಯ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಜಾಗದಲ್ಲಿ ಮಾಲ್ ನಿರ್ಮಾಣಕ್ಕೆ ಅಂದಿನ ಬಿಜೆಪಿ ಸರ್ಕಾರ ಜಾಗವನ್ನು ಮಂಜೂರು ಮಾಡಿತ್ತು. ಶಾಸಕ ಜ್ಯೋತಿ ಗಣೇಶ್ ಸೂಚನೆಯಂತೆ ಇಲ್ಲಿದ್ದ ಮಂದಿರವನ್ನು ತುಮಕೂರು ಮಹಾನಗರ ಪಾಲಿಕೆಯ ಭ್ರಷ್ಟ ಅಧಿಕಾರಿಗಳು ನೆಲಸಮ ಮಾಡಿ ಮಾಲ್ ನಿರ್ಮಾಣ ಮಾಡಲು ಮುಂದಾಗಿತ್ತು. ಆದರೆ ಅಂದು ಬಜರಂಗದಳ ಹೋರಾಟ ಮಾಡಿ ಮಾಲ್ ನಿರ್ಮಾಣವನ್ನು ತಡೆಹಿಡಿದಿದ್ದರು. ಇದೀಗ ಮಾಲ್ ನಿರ್ಮಾಣ ವಿಚಾರ ಮುನ್ನೆಲೆಗೆ ಬಂದಿದ್ದು ಬಜರಂಗದಳ ಕಾರ್ಯಕರ್ತರ ಕಿಚ್ಚು ತಾರಕ್ಕೇರಿದೆ.
ಸಿದ್ದಿವಿನಾಯಕ ದೇವಸ್ಥಾನ ಹಾಗೂ ಸಾರ್ವಜನಿಕ ಉದ್ಯಾನವನದ ಸುಮಾರು 1 ಎಕರೆ ಜಮೀನು ಕೋಟ್ಯಾಂತರ ರೂಪಾಯಿ ಬೆಲೆ ಬಾಳ್ತಾ ಇದ್ದು, ಈ ಜಾಗವನ್ನು ಅಧಿಕಾರಿಗಳು, ಜನಪ್ರತಿನಿಧಿಗಳೊಂದಿಗೆ ಶಾಮೀಲಾಗಿ ಕಾನೂನು ಬಾಹಿರವಾಗಿ ಮಾಲ್ ನಿರ್ಮಿಸಲು ಜ್ಯೋತಿಗಣೇಶ್ ಅವರು ನೀಡಿದ್ದರು. ಆದರೆ ಆ ಜಾಗವನ್ನು ಅಂದಿನಿಂದಲೂ ಉಳಿಸಲು ಭಜರಂಗದಳದ ಕಾರ್ಯಕರ್ತ ಮಂಜು ಭಾರ್ಗವ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಲೇ ಬಂದಿದ್ದು, ಶಾಸಕ ಜ್ಯೋತಿ ಗಣೇಶ್ ಮತ್ತು ಸರ್ಕಾರದ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಭಜರಂಗದಳದ ಮಂಜು ಭಾರ್ಗವ್ ಹಾಗೂ ಕಾರ್ಯಕರ್ತರ ಮೇಲೆ ದುರುದ್ದೇಶಪೂರ್ವಕವಾಗಿ ಸುಳ್ಳು ದೂರು ನೀಡಿ, ಇನ್ನಿಲ್ಲದ ಕಿರುಕುಳ ನೀಡಲು ಮುಂದಾಗಿದ್ದಾರೆ. ಈ ಜಾಗವನ್ನು ಶತಾಯ ಗತಾಯ ಉಳಿಸಲು ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಫೀಲ್ಡ್‌ಗೆ ಇಳಿದಿದ್ದು, ದಾಖಲೆ ಸಮೇತ ಶಾಸಕ ಜ್ಯೋತಿ ಗಣೇಶ್ ವಿರುದ್ಧ ಆರೋಪ ಮಾಡಿದ್ದಾರೆ. ಅಲ್ಲದೇ ಶಾಸಕ ಜ್ಯೋತಿ ಗಣೇಶ್ ವಿರುದ್ಧ ಬಜರಂಗದಳ ಕಾರ್ಯಕರ್ತರು ಭಿತ್ತಿಪತ್ರಗಳನ್ನು ಹೊರಡಿಸಿದ್ದರು. ಸಂಕಷ್ಟಹರ ಗಣೇಶನಿಗೆ ಜ್ಯೋತಿಗಣೇಶನೇ ಸಂಕಷ್ಟ, ಹಿಂದೂಗಳ ಮತ ಪಡೆದ ಬಿಜೆಪಿ ಹಿಂದೂವಿನ ಹಿತ ಮರೆಯಿತೇ, ಆ್ಯಂಟಿ ಹಿಂದೂ ಎಂಎಲ್‌ಎ ಹಠಾವೋ ಮಂದಿರ ಬಚಾವೋ ಎಂಬ ಸ್ಲೋಗನ್‌ವುಳ್ಳ ಭಿತ್ತಿಪತ್ರಗಳನ್ನು ಹೊರಡಿಸುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಸಿದ್ದಿ ವಿನಾಯಕ ದೇಗುಲ ಜಾಗವನ್ನು ಪ್ರಮೋದ್ ಮುತಾಲಿಕ್ ನೇತೃತ್ವದ ತಂಡ ಜಾಗ ವೀಕ್ಷಣೆ ಬಳಿಕ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಜ್ಯೋತಿ ಗಣೇಶ್ ಹಾಗೂ ಸರ್ಕಾರದ ವಿರುದ್ಧ ಕಿಡಿಕಾರಿದರು. ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮಾತನಾಡಿ, ಜಿಹಾದ್ ಮಾನಸಿಕ ಸ್ಥಿತಿ ಇಡೀ ಜಗತ್ತಿನಲ್ಲಿದೆ. ಜಾಗ ಕಬಳಿಸಿದರೆ ಜಿಹಾದ್ ಮೂಲಕ ಆಳಬಹುದು ಅಂದುಕೊಂಡಿದ್ದಾರೆ. ವಕ್ಫ್ ಬೋರ್ಡ್ ಹೆಸರಲ್ಲಿ ಅರಣ್ಯ ಇಲಾಖೆ ಜಾಗ, ಗೋಮಾಳ, ಬೆಟ್ಟ ಗುಡ್ಡ ಎಲ್ಲವನ್ನು ಹಿಂದೂಗಳನ್ನು ಹೆದರಿಸಿ ಜಾಗ ಕಬಳಿಸುತ್ತಿದ್ದಾರೆ. ಈ ಲ್ಯಾಂಡ್ ಜಿಹಾದ್‌ನಲ್ಲಿ ಎಲ್ಲಾ ಪಕ್ಷದವರು ಸೇರಿಕೊಂಡಿದ್ದಾರೆ. ಅದೇ ಮಾದರಿಯಲ್ಲಿ ತುಮಕೂರಿನಲ್ಲಿ ಎಲ್ಲಾ ಪಕ್ಷದವರು ದೇವಸ್ಥಾನದ ಜಾಗ ಕಮಿಷನ್ ಗೋಸ್ಕರ ಕಬಳಿಸಲು ಹೊರಟಿದ್ದಾರೆ. ಇಡೀ ದೇಶದಲ್ಲಿ ನಡೆಯುತ್ತಿರುವ ಲ್ಯಾಂಡ್ ಜೀಹಾದ್ ವಿರುದ್ದ ನಾವು ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದರು.
ಇನ್ನು ಈ ವೇಳೆ ಬಜರಂಗದಳದ ಕಾರ್ಯಕರ್ತ ಮಂಜು ಭಾರ್ಗವ್ ಮಾತನಾಡಿ, ಇಸ್ಲಾಮಿಕ್ ಎಜುಕೇಷನ್ ಟ್ರಸ್ಟ್ ಗೆ ಮಾಲ್ ನಿರ್ಮಾಣ ಮಾಡಲು ಬಿಜೆಪಿ ಅವಧಿಯಲ್ಲಿ ಹೊರಟಿತ್ತು, ಆಗ ದೇವಸ್ಥಾನ ಒಡೆದು ಗರ್ಭಗುಡಿ ಮಾತ್ರ ಉಳಿದಿತ್ತು. ಅಂದಿನ ಬಿಜೆಪಿ ಕಾರ್ಪೋರೇಟರ್ ನಮಗೆ ಹೋರಾಟ ನಿಲ್ಲಿಸುವಂತೆ ಹಣದ ಆಮಿಷ ಒಡ್ಡಿದ್ದರು. ತುಮಕೂರಿನ ಬೆಲೆ ಬಾಳುವ ಜಾಗವನ್ನು ಖರೀದಿ ಮಾಡಿರುವ ಬಗ್ಗೆ ದಾಖಲೆ ಸಮೇತ ಬಿಚ್ಚಿಡುತ್ತೇವೆ. ಬಿಜೆಪಿ ಹಾಗೂ ಕಾಂಗ್ರೆಸ್ ನವರು ಇಬ್ಬರು ಸೇರಿ ದೇವಸ್ಥಾನದ ಜಾಗ ಹೊಡೆಯಲು ಹೊರಟ್ಟಿದ್ದಾರೆ. ಮೇಲ್ನೋಟಕ್ಕೆ ಬಿಜೆಪಿ ಶಾಸಕರು ಹೋರಾಟ ಮಾಡಲು ಬಂದಿದ್ದರು. ಆದರೆ ಅವರೆಲ್ಲಾ ಸೇರಿ ಈಗ ಜಾಗ ಕಬಳಿಸಲು ಮುಂದಾಗಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಒಟ್ಟಿನಲ್ಲಿ ತುಮಕೂರಿನಲ್ಲಿ ಸಿದ್ದಿವಿನಾಯಕ ದೇವಸ್ಥಾನದ ಜಾಗದಲ್ಲಿ ಮಾಲ್ ನಿರ್ಮಾಣದ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಮಾಲ್ ನಿರ್ಮಾಣ ಆಗುತ್ತಾ ಆಥವಾ ಬಜರಂಗ ದಳ ಹೋರಾಟಕ್ಕೆ ಮಾಲ್ ಅರ್ಧಕ್ಕೆ ಸ್ಥಗಿತವಾಗುತ್ತಾ, ಹೋರಾಟ ಮತ್ಯಾವ ರೀತಿ ತಿರುವು ಪಡೆದುಕೊಳ್ಳುತ್ತೋ ಕಾದುನೋಡಬೇಕಿದೆ.