ತುಮಕೂರು :
ತುಮಕೂರು ನಗರ ಸ್ಮಾರ್ಟ್ ಸಿಟಿ ಖ್ಯಾತಿಗೆ ಪಾತ್ರವಾಗಿದೆ. ಈ ಸ್ಮಾರ್ಟ್ ಯೋಜನೆಯಡಿ ನಗರಕ್ಕೆ ಕೋಟಿ ಕೋಟಿ ಅನುದಾನ ಕೂಡ ಹರಿದುಬಂದಿದೆ. ಆದರೆ ತುಮಕೂರು ನಗರ ಸ್ಮಾರ್ಟ್ ಆಗೋದ್ಯಾವಾಗ ಅನ್ನೋ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡೋದಕ್ಕೆ ಶುರುವಾಗಿದೆ. ಯಾಕೆಂದರೆ ಕಸದ ಸಮಸ್ಯೆ ತುಮಕೂರು ಜನರನ್ನು ಹೈರಾಣಾಗಿಸಿದೆ. ಎಲ್ಲೆಂದರಲ್ಲಿ ಕಸದ ರಾಶಿಗಳು ಕಾಣಿಸ್ತಿದ್ದು, ಸ್ಮಾರ್ಟ್ ಸಿಟಿ ಹೆಗ್ಗಳಿಕೆಗೆ ಕಳಂಕ ಬರುವಂತಾಗಿದೆ.
ನಿಮ್ಮ ಪ್ರಜಾಶಕ್ತಿ ಟಿವಿ ತುಮಕೂರು ನಗರದ ಸಮಸ್ಯೆಗಳನ್ನು ಅಧಿಕಾರಿಗಳ ಮುಂದಿಟ್ಟು, ಅವುಗಳಿಗೆ ಪರಿಹಾರ ಒದಗಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಲೇ ಬರ್ತಿದೆ. ಇವತ್ತು ತುಮಕೂರಿನ ಜಿಲ್ಲಾಧಿಕಾರಿ ಕಚೇರಿಯಿಂದ ಕೂಗಳತೆ ದೂರದಲ್ಲೇ ಇರುವ, ಕೋಡಿ ಬಸವೇಶ್ವರಸ್ವಾಮಿ ದೇವಸ್ಥಾನದ ಮುಂದಿನ ದುಸ್ಥಿತಿಯನ್ನು ನಿಮ್ಮ ಮುಂದಿಡುವ ಕೆಲಸ ಮಾಡ್ತೀವಿ ನೋಡಿ.
ಕೋಟೆ ಆಂಜನೇಯಸ್ವಾಮಿ ಸರ್ಕಲ್ನಿಂದ ಸ್ವಲ್ಪ ಕೆಳಗೆ ಹೋದರೆ ನಿಮಗೆ ಕೋಡಿ ಬಸವೇಶ್ವರಸ್ವಾಮಿ ದೇವಸ್ಥಾನ ಸಿಗುತ್ತೆ. ಇದರ ಎದುರುಗಡೆಯೇ ಗಾರ್ಡನ್ ರಸ್ತೆಯಿದೆ. ಈ ಗಾರ್ಡನ್ ರಸ್ತೆಯ ಪಕ್ಕದಲ್ಲಿಯೇ ರಾಶಿ ರಾಶಿ ಕಸ ಬಿದ್ದುಕೊಂಡಿದೆ. ತಿಂಗಳುಗಟ್ಟಲೇಯಿಂದ ಕಸದ ರಾಶಿ ಬಿದ್ದಿದ್ದರೂ ಕೂಡ ಯಾರೂ ಇದನ್ನು ಸ್ವಚ್ಛಗೊಳಿಸುವ ಕೆಲ ಮಾಡಿಲ್ಲ. ಇನ್ನು ಇದರ ಸಮೀಪದಲ್ಲಿಯೇ ಜಿಲ್ಲಾಧಿಕಾರಿ ಕಚೇರಿ, ನ್ಯಾಯಾಲಯವಿದೆ. ಇನ್ನೂ ಹಲವಾರು ಕಚೇರಿಗಳಿವೆ. ಹಲವು ಅಧಿಕಾರಿಗಳು ಪ್ರತಿನಿತ್ಯ ಈ ರಸ್ತೆಯಲ್ಲಿಯೇ ಓಡಾಡ್ತಾರೆ. ಅವರಿಗೆ ಇದು ಕಾಣಿಸಿದ್ಯೋ ಇಲ್ವೋ ಗೊತ್ತಿಲ್ಲ ಅಥವಾ ಕಂಡರೂ ಕಾಣದಂತೆ ಓಡಾಡ್ತಿದ್ದಾರೋ ಆ ದೇವರೇ ಬಲ್ಲ.
ಇನ್ನು ಒಂದು ಕಡೆ ಚರಂಡಿ ದುರ್ನಾತ. .ಮತ್ತೊಂದೆಡೆ ಹೀಗೆ ಎಲ್ಲೆಂದರಲ್ಲಿ ಬಿದ್ದಿರುವ ಕೊಳೆತ ಕಸದ ರಾಶಿ. ಹೀಗಾಗಿ ಇಲ್ಲಿ ಸಾರ್ವಜನಿಕರು ಮೂಗು ಮುಚ್ಚಿಕೊಂಡೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.