ತುಮಕೂರು : ಖಡಕ್ ಆಫೀಸರ್ ನಿವೃತ್ತಿ | ಹೂಮಳೆ ಸುರಿಸಿದ ಪೊಲೀಸರು

ತುಮಕೂರು :

ಖಡಕ್‌ ಪೊಲೀಸ್‌ ಖದರ್‌ ಆಗಿಯೇ ಕೆಲಸ ಮಾಡ್ತಿದ್ದ ಆಫೀಸರ್‌. ಸುಮಾರು ೩ ದಶಕಗಳ ಕಾಲ ಖಾಕಿ ತೊಟ್ಟು ಕಳ್ಳ, ಖದೀಮರ ಬೆವರಿಳಿಸಿದ್ದ ಪೊಲೀಸ್‌ ಅಧಿಕಾರಿ ಇದೀಗ ಸೇವೆಯಿಂದ ನಿವೃತ್ತರಾಗಿದ್ದಾರೆ.  

ಯೆಸ್‌.. ೩೦ ವರ್ಷಕ್ಕೂ ಅಧಿಕ ಕಾಲ ಇಲಾಖೆಯಲ್ಲಿ ಕೆಲಸ ಮಾಡಿ ಜನಮೆಚ್ಚುಗೆ ಗಳಿಸಿದ್ದ ಎಎಸ್‌ಪಿ ವಿ. ಮರಿಯಪ್ಪ ಇದೀಗ ನಿವೃತ್ತಿ ಹೊಂದಿದ್ದಾರೆ. ಹೀಗಾಗಿ ನಿನ್ನೆ ತುಮಕೂರಿನಲ್ಲಿ ಪೊಲೀಸ್‌ ಇಲಾಖೆಯ ವತಿಯಿಂದ ಎಎಸ್‌ಪಿ ಮರಿಯಪ್ಪ ಅವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ತುಮಕೂರಿನ ಗ್ರಂಥಾಲಯದ ಸಭಾಂಗಣದಲ್ಲಿ ನಡೆದ ಬೀಳ್ಕೋಡುಗೆ ಸಮಾರಂಭವನ್ನು ಹಿರೇಮಠದ ಅಧ್ಯಕ್ಷರಾದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮತ್ತು ಬೆಳ್ಳಾವಿಯ ಶ್ರೀ ಕಾರದ ವೀರಬಸವ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ತುಮಕೂರು ಎಸ್ ಪಿ ಅಶೋಕ್ ವೆಂಕಟ್, ಜಿಲ್ಲಾ ಪಂಚಾಯತ್ ಸಿಇಓ ಜಿ.ಪ್ರಭು, ಮರಿಯಪ್ಪ ಕುಟುಂಬಸ್ಥರು  ಸೇರಿ ಜಿಲ್ಲೆಯ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಮತ್ತು ಮರಿಯಪ್ಪ ಅವರ ಅಭಿಮಾನಿಗಳು ಭಾಗಿಯಾಗಿದ್ದರು. ಈ ವೇಳೆ ಪೊಲೀಸರು ಮರಿಯಪ್ಪ ದಂಪತಿ ಮೇಲೆ ಹೂಮಳೆಯನ್ನು ಸುರಿಸಿ ಅಭಿನಂದಿಸಿದರು.

33 ವರ್ಷಗಳ ಕಾಲ ಪೊಲೀಸ್‌ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ, ಸಾರ್ವಜನಿಕ ಸೇವೆಗೆ ತಮ್ಮ ಜೀವನವನ್ನೇ ಅರ್ಪಿಸಿರುವ ವಿ.ಮರಿಯಪ್ಪ ಇದೀಗ ಗೌರವಾನ್ವಿತ ನಿವೃತ್ತಿ ಹೊಂದಿದ್ದಾರೆ. ತಾವರೆಕೆರೆ, ಗುಬ್ಬಿ, ಬೆಂಗಳೂರು, ಕನಕಪುರ ಸೇರಿದಂತೆ ಹಲವು ಪೊಲೀಸ್ ಠಾಣೆಗಳಲ್ಲಿ ಮರಿಯಪ್ಪ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೇ 1994ರಲ್ಲಿ ಪಾವಗಡದಲ್ಲಿ ನಕ್ಸಲ್ ನಿಗ್ರಹ ದಳದಲ್ಲಿ ಕರ್ತವ್ಯ ನಿರ್ವಹಿಸಿದ್ದು ನಕ್ಸಲ್ ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದರು, ಅಲ್ಲದೇ 2001ರ ಜಿಲ್ಲಾ ಪಂಚಾಯತ್ ಚುನಾವಣಾ ವೇಳೆ ಗುಬ್ಬಿಯಲ್ಲಿ ನಡೆದ ಬಹುದೊಡ್ಡ ಗುಂಪು ಘರ್ಷಣೆಯನ್ನು ನಿಯಂತ್ರಿಸಿದ ಕೀರ್ತಿ ಮರಿಯಪ್ಪ ಅವರದ್ದು. 2005ರಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿದ್ದ ಮಟ್ಕಾ ಪ್ರಕರಣಗಳನ್ನು ಯಶಸ್ವಿಯಾಗಿ ನಿಯಂತ್ರಿಸಿದ್ದಾರೆ. ಇಷ್ಟೆಲ್ಲಾ ಸಾಧನೆಗಳನ್ನ ಮಾಡಿರುವ ಮರಿಯಪ್ಪ ಅವರನ್ನು ಪೊಲೀಸ್ ಇಲಾಖೆ ಬಹಳ ಅದ್ದೂರಿಯಾಗಿ ಸನ್ಮಾನಿಸಿದರು.

ಹಿರೇಮಠದ ಮಠಾಧೀಶ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮರಿಯಪ್ಪ ಅವರ ವ್ಯಕ್ತಿತ್ವ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳದಂತಹ ವ್ಯಕ್ತಿತ್ವ. ಹೀಗಾಗಿಯೇ ಅವರು 33 ವರ್ಷ ಇಲಾಖೆಯಲ್ಲಿ ಸಮರ್ಥವಾಗಿ  ಸೇವೆ ಸಲ್ಲಿದ್ದಾರೆ ಎಂದರು.  ಬಳಿಕ ಮಾತನಾಡಿದ ತುಮಕೂರು ಎಸ್‌ಪಿ ಅಶೋಕ್‌ ವೆಂಕಟ್‌, ವಿ.ಮರಿಯಪ್ಪ ಅವರು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದು, ಪ್ರತಿ ಹಂತದಲ್ಲೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ತಮ್ಮದೇ ಆದ ಪ್ರಭಾವ ಬೀರಿದ್ದಾರೆ. ಅವರ ಆಡಳಿತ ಶೈಲಿ, ಸೂಕ್ಷ್ಮವಾದ ತನಿಖಾ ಕೌಶಲ್ಯಗಳು, ನ್ಯಾಯಸಮ್ಮತ ಮತ್ತು ಜನಸ್ನೇಹಿ ನಡೆ, ಕಠಿಣ ಶಿಸ್ತು, ದಿಟ್ಟ ನಿರ್ಧಾರಗಳು ಹಾಗೂ ಮಾನವೀಯತೆ ತುಂಬಿದ ವ್ಯಕ್ತಿತ್ವದಿಂದ ಈ ಹುದ್ದೆಗಳಲ್ಲಿ ವಿಶೇಷವಾಗಿ ಗಮನ ಸೆಳೆದಿದ್ದಾರೆ ಎಂದು ಹೇಳಿದರು.

ಕೊನೆಯಲ್ಲಿ ಮಾತನಾಡಿದ ವಿ.ಮರಿಯಪ್ಪ, ನಾನು ಕಾನ್ಸ್‌ ಟೇಬಲ್ ಆಗಬೇಕು ಅಂತ ಪೊಲೀಸ್ ಇಲಾಖೆಗೆ ಬಂದೆ. ಆದರೆ ಇಂದು ನಾನು ಅಡಿಷನಲ್ ಎಸ್‌ಪಿ ಆಗಿ ನಿವೃತ್ತಿ ಹೊಂದುತ್ತಿದ್ದೇನೆ. ಪೊಲೀಸ್ ಇಲಾಖೆಯ ಸಾಕಷ್ಟು ಸನ್ನಿವೇಶಗಳನ್ನು ನಾನು ನೋಡಿದ್ದೇನೆ. ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬೇಡಿ. ನೊಂದು ಬಂದ ಬಡವರಿಗೆ ದೀನ ದಲಿತರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಎಂದು ಪೊಲೀಸರಿಗೆ ಕಿವಿಮಾತುಗಳನ್ನು ಹೇಳಿದರು. ಜೊತೆಗೆ ಪೊಲೀಸ್ ಇಲಾಖೆಯಲ್ಲಿ  ಕೊನೆ ದಿನದ ಈ ಕ್ಷಣವನ್ನು ನೆನೆದು ಕಣ್ಣೀರಿಟ್ಟರು.

ಒಟ್ಟಿನಲ್ಲಿ ವಿ. ಮರಿಯಪ್ಪ ಅವರು ತಾವು ಕಾರ್ಯ ನಿರ್ವಹಿಸಿದ ಪ್ರತಿಯೊಂದು ಹುದ್ದೆಯಲ್ಲಿಯೂ ಸಹೋದ್ಯೋಗಿಗಳ ಮತ್ತು ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರ ನಿವೃತ್ತಿಯ ಜೀವನ ಸುಖಕರವಾಗಿರಲಿ ಅನ್ನೋದು ಪ್ರಜಾಶಕ್ತಿ  ಟಿವಿಯ ಹಾರೈಕೆ.

Author:

share
No Reviews