ತುಮಕೂರು:
ಇನ್ನು ಕೂಡ ಬೇಸಿಗೆ ಕಾಲವೇ ಆರಂಭವಾಗಿಲ್ಲ. ಫೆಬ್ರವರಿ ತಿಂಗಳು ಅರ್ಧ ಕೂಡ ಕಳೆದಿಲ್ಲ. ಅದಾಗಲೇ ಕಲ್ಪತರು ನಾಡು ತುಮಕೂರಿನಲ್ಲಿ ಜೀವಜಲಕ್ಕಾಗಿ ಹಾಹಾಕಾರ ಶುರುವಾಗಿದೆ. ತುಮಕೂರಿನ ಅದೊಂದು ಏರಿಯಾದಲ್ಲಿ ಕುಡಿಯುವ ನೀರಿಗೂ ತಾತ್ಸಾರ ಎದುರಾಗಿಬಿಟ್ಟಿದೆ.
ತುಮಕೂರಿಗೆ ಕುಡಿಯುವ ನೀರು ಪೂರೈಸುವ ಬುಗುಡನಹಳ್ಳಿ ಕೆರೆ ಭರ್ತಿಯಾಗಿದೆ. ಹೀಗಾಗಿ ಸದ್ಯಕ್ಕಂತೂ ನಗರವಾಸಿಗಳಿಗೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಿಲ್ವಲ್ಲಾ ಅಂತಾ ನೀವು ಅಂದುಕೊಳ್ಳುತ್ತಿರಬಹುದು. ಆದರೆ ತುಮಕೂರಿನ ರಾಜೀವ್ ಗಾಂಧಿ ನಗರದ ಜನರು ಕುಡಿಯುವ ನೀರಿಗಾಗಿ ಪ್ರತಿನಿತ್ಯ ಪರದಾಡುತ್ತಿದ್ದಾರೆ.
ರಾಜೀವ್ ಗಾಂಧಿನಗರದ ಬಿ ಬ್ಲಾಕ್ ನ ಆರನೇ ಕ್ರಾಸ್ ನಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಕಳೆದ ಹತ್ತು ದಿನಗಳಿಂದ ಈ ಏರಿಯಾಗೆ ನೀರನ್ನೇ ಬಿಟ್ಟಿಲ್ಲವಂತೆ. ಕೇಳಿದರೆ ಮೋಟಾರ್ ಸರಿಯಿಲ್ಲ. ಟ್ಯಾಂಕ್ ತೊಂದರೆಯಾಗಿದೆ ಅಂತ ಹೇಳುತ್ತಿದ್ದಾರಂತೆ. ಇದರಿಂದ ಆಕ್ರೋಶಗೊಂಡ ಮಹಿಳೆಯರು ರಸ್ತೆಯಲ್ಲಿ ಖಾಲಿ ಬಿಂದಿಗೆಗಳು, ಬಕೆಟ್ಗಳನ್ನಿಟ್ಟು ಆಕ್ರೋಶ ಹೊರಹಾಕಿದರು. ಮಹಾನಗರಪಾಲಿಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಹಿಡಿಶಾಪ ಹಾಕಿದ್ದಾರೆ.
ಅಧಿಕಾರಿಗಳು ಈ ಕಡೆ ಮುಖವನ್ನೇ ಹಾಕ್ತಿಲ್ಲ. ಇನ್ನು ಶಾಸಕರು, ಕಾರ್ಪೊರೇಟರ್ಗಳು ಎಲೆಕ್ಷನ್ ಬಂದಾಗ ಮಾತ್ರ ನಮ್ಮ ಮನೆ ಮುಂದೆ ಬರ್ತಾರೆ ಕೈ ಮುಗಿದು ವೋಟ್ ಹಾಕಿ ಅಂತ ಕೇಳ್ತಾರೆ. ಆದರೆ ನಮಗೆ ತೊಂದರೆ ಆದಾಗ ಯಾರೂ ಬರಲ್ಲ. ಕಳೆದ ಹತ್ತು ದಿನಗಳಿಂದ ಕುಡಿಯುವ ನೀರು ಬಿಡುತ್ತಿಲ್ಲ. ಇದರ ಬಗ್ಗೆ ಕೇಳಿದರೆ ಇಂಜಿನಿಯರ್ ಗೆ ಕಂಪ್ಲೇಂಟ್ ಮಾಡಿದ್ದೀನಿ ಅವರಿನ್ನೂ ಆಕ್ಷನ್ ತೆಗೆದುಕೊಂಡಿಲ್ಲ ಎಂದು ವಾಟರ್ ಮ್ಯಾನ್ ಹೇಳುತ್ತಿದ್ದಾರೆ. ಇಂಜಿನಿಯರ್ ಗೆ ಕಾಲ್ ಮಾಡಿದರೆ ಪೋನ್ ತೆಗಿತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನು ಕಳೆದ ೧೦ ದಿನಗಳಿಂದ ಕುಡಿಯುವ ನೀರು ಬಿಡದೇ ಇರೋ ಕಾರಣ ಟ್ಯಾಂಕರ್ ಕರೆಸಿ ನೀರು ಕೊಂಡುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಒಂದು ಟ್ಯಾಂಕರ್ ಗೆ 500 ರಿಂದ 600 ಹಣ ಕೇಳ್ತಿದ್ದಾರೆ. ಹಣ ಇದ್ದೋರು ಟ್ಯಾಂಕರ್ ನೀರು ಹಾಕಿಸಿಕೊಳ್ತಾರೆ. ಆದರೆ ನಾವು ಬಡವರು ಏನು ಮಾಡೋದು ಎಂದು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ. ಒಟ್ಟಿನಲ್ಲಿ ಅಧಿಕಾರಿಗಳ ಎಡವಟ್ಟಿನಿಂದಾಗಿ ಬೇಸಿಗೆ ಆರಂಭಕ್ಕೂ ಮೊದಲೇ ತುಮಕೂರಿನಲ್ಲಿ ಕುಡಿಯುವ ನೀರಿಗೆ ತಾತ್ಸಾರ ಎದುರಾಗಿದ್ದು, ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಏರಿಯಾದ ಜನರ ಸಮಸ್ಯೆಗೆ ಪರಿಹಾರ ನೀಡಬೇಕಿದೆ.