ತುಮಕೂರು :
ಎಲ್ಲಿ ನೋಡಿದ್ರೂ ಈಗ ಐಪಿಎಲ್‌ನದ್ದೇ ಹವಾ. ದೇಶದೆಲ್ಲೆಡೆ ಈಗ ವಿಶ್ವ ಕ್ರಿಕೆಟ್‌ನ ಶ್ರೀಮಂತ ಟೂರ್ನಿ, ದುಡ್ಡಿನ ಹೊಳೆಯನ್ನೇ ಹರಿಸೋ ಐಪಿಎಲ್ ಟೂರ್ನಿಯ ಕ್ರೇಜ್ ಹೆಚ್ಚಾಗಿದೆ. ದಿನೇದಿನೇ ಐಪಿಎಲ್‌ನ ಕಾವು ಹೆಚ್ಚಾಗ್ತಿದ್ದು ಕ್ರಿಕೆಟ್ ಪ್ರೇಮಿಗಳು ತಮ್ಮ ತಮ್ಮ ನೆಚ್ಚಿನ ತಂಡಗಳು ಮತ್ತು ಆಟಗಾರರ ಆಟವನ್ನು ಕಣ್ತುಂಬಿಕೊಂಡು ಖುಷಿಪಡ್ತಿದ್ದಾರೆ. ಈ ನಡುವೆ ತುಮಕೂರಿನಲ್ಲಿ ಜೆಪಿಎಲ್ ಹವಾ ಶುರುವಾಗಿದೆ.
ಡಾ.ಬಿ.ಆರ್.ಅಂಬೇಡ್ಕರ್ ನಗರ ಅಭಿವೃದ್ಧಿ ಸಂಘದ ವತಿಯಿಂದ ತುಮಕೂರು ನಗರದ ಜಯಪುರದಲ್ಲಿ 134ನೇ ಅಂಬೇಡ್ಕರ್ ಜಯಂತಿ ಪ್ರಯುಕ್ತ ಜಯಪುರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ. ಈ ಜೆಪಿಎಲ್ ಟೂರ್ನಿಗೆ ಇಂದು ಅದ್ದೂರಿ ಚಾಲನೆ ದೊರೆತಿದೆ.
ಕ್ರಿಕೆಟ್ ಪ್ರಂದ್ಯಾವಳಿಯನ್ನು ಕೆಪಿಸಿಸಿ ಉಪಾಧ್ಯಕ್ಷ ಮುರಳಿಧರ ಹಾಲಪ್ಪ ಉದ್ಘಾಟಿಸಿದರು. ಜ್ಯೋತಿ ಬೆಳಗುವುದರ ಮೂಲಕ ಪಂದ್ಯಾವಳಿಯನ್ನು ಉದ್ಘಾಟಿಸಿದ ಮುರಳೀಧರ ಹಾಲಪ್ಪ, ಜೈಪುರದಲ್ಲಿ ಕ್ರಿಕೆಟ್ ಪ್ರೀಮಿಯರ್ ಲೀಗ್ ನಡೆಯುತ್ತಿರುವುದು ತುಂಬಾ ಖುಷಿ ತಂದಿದೆ. ನಾವೆಲ್ಲರೂ ಸಿಸಿಎಲ್, ಕೆಪಿಎಲ್, ಐಪಿಎಲ್ ನೋಡಿದ್ದೇವೆ. ಆದರೆ ಜೈಪುರದಲ್ಲಿ ಜೆಪಿಎಲ್ ನಡೆಯುತ್ತಿದೆ. ಹುಡುಗರು ತುಂಬಾ ಉತ್ಸುಕರಾಗಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಈ ಪಂದ್ಯಾವಳಿ ಇನ್ನು ದೊಡ್ಡದಾಗಿ ನಡೆಯಲಿ ಎಂದು ಶುಭಹಾರೈಸಿದರು.
ಇನ್ನು ಯುವಕರ ಒತ್ತಾಯದ ಮೇರೆಗೆ ಮುರಳಿಧರ ಹಾಲಪ್ಪ ಸೇರಿದಂತೆ ಮುಖಂಡರು ಕೂಡ ಬ್ಯಾಟ್ ಹಿಡಿದು ಮೈದಾನಕ್ಕಿಳಿದರು. ಬ್ಯಾಟಿಂಗ್ ಮಾಡುವ ಮೂಲಕ ಯುವಕರನ್ನು ಹುರಿದುಂಬಿಸಿದರು. ಬಳಿಕ ಎಲ್ಲಾ ತಂಡಗಳಿಗೆ ಶುಭಕೋರಿದರು. ನಂತರ ಪಂದ್ಯಗಳು ಆರಂಭವಾಗಿದೆ.