ತುಮಕೂರು:
ಗೃಹ ಸಚಿವರ ತವರು ಕ್ಷೇತ್ರ ತುಮಕೂರು ಜಿಲ್ಲೆಯಲ್ಲಿ ದಿನೇ ದಿನೇ ಮೈಕ್ರೋ ಫೈನಾನ್ಸ್ ಗಳ ಕಾಟ ಹೆಚ್ಚಾಗ್ತಾನೆ ಇದೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಮೂಗುದಾರ ಹಾಕಲು ಅದೆಷ್ಟೋ ಕ್ರಮ ಕೈಗೊಂಡರೂ ಕೂಡ ಮೈಕ್ರೋ ಫೈನಾನ್ಸ್ ಕಾಟ ಮಾತ್ರ ಮಿತಿ ಮೀರುತ್ತಲೇ ಇದೆ. ಅದಕ್ಕೆ ಸಾಕ್ಷಿಯಾಗಿದ್ದು ತುಮಕೂರು ಜಿಲ್ಲೆಯಲ್ಲಿ ನೆನ್ನೆ ನಡೆದಿರುವ ಎರಡು ಆತ್ಮಹತ್ಯೆ ಪ್ರಕರಣಗಳು
ತುಮಕೂರು ಜಿಲ್ಲೆಯಲ್ಲಿ ಇಬ್ಬರು ಕೂಲಿ ಕಾರ್ಮಿಕರು ಸಾಲಗಾರರ ಕಾಟ ತಾಳಲಾರದೇ ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. ತುಮಕೂರು ನಗರದ ಸಿದ್ದರಾಮೇಶ್ವರ ಬಡಾವಣೆಯ ನಿವಾಸಿ ಅಂಜನಮೂರ್ತಿ ಎಂಬಾತ ಮೈಕ್ರೋ ಫೈನಾನ್ಸ್ ಕಾಟ ತಾಳಲಾರದೇ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈತ APMC ಮಾರ್ಕೆಟ್ನಲ್ಲಿ ಹಮಾಲಿ ಕೆಲಸ ಮಾಡ್ತಾ ಇದ್ದು, ಎನ್.ಆರ್ ಕಾಲೋನಿ ಸುಪ್ರೀಂ, ವೆಂಕಿ ಫೈನಾನ್ಸ್, ಹಾಗೂ SIT ಮ್ಯಾನೇಜರ್ ಬಳಿ ಎರಡು ಲಕ್ಷ ಸಾಲ ಮಾಡಿಕೊಂಡಿದ್ದು, ಸಾಲ ತೀರಿಸಲು ಸಾಧ್ಯವಾಗದೇ ಸಾವಿನ ದಾರಿ ಹಿಡಿದಿದ್ದಾರೆ.
ಅಂಜನಮೂರ್ತಿ ತನ್ನ ಸಾವಿನ ರಹಸ್ಯವನ್ನು ಸೆಲ್ಫಿ ವಿಡಿಯೋ ಮೂಲಕ ಬಿಚ್ಚಿಟ್ಟು ಸಾವಿಗೆ ಶರಣಾದ ಕೆಲವೇ ಗಂಟೆಗಳಲ್ಲಿ ಕುಣಿಗಲ್ ತಾಲೂಕಿನ ಕೊತ್ತಿಪುರ ಗ್ರಾಮದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಮಹಿಳೆಯೋರ್ವಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಅಜೀಜ್ ಉನ್ನಿಸಾ ಎಂಬ ಮಹಿಳೆ ಮುತ್ತೂಟ್ ಫೈನಾನ್ಸ್, ಗ್ರಾಮೀಣ ಕೂಟ, IDFC, ಬಂಧನ್, RB̧L ಆಶೀರ್ವಾದ್, ಸೂರ್ಯೋದಯ, ಗ್ರಾಮಶಕ್ತಿ ಸೇರಿದಂತೆ ಹಲವು ಕಡೆ ಮಕ್ಕಳ ಮದುವೆಗೆಂದು ಸುಮಾರು 12 ಲಕ್ಷ ಸಾಲ ಮಾಡಿಕೊಂಡಿದ್ದರು. ಸಾಲಗಾರರ ಕಾಟ ಮಿತಿಮೀರಿ ಮನನೊಂದು ಮಹಿಳೆ ಅಜೀಜ್ ಉನ್ನಿಸಾ ಸೂಸೈಡ್ ಮಾಡಿಕೊಂಡಿದ್ದಾರೆ.
ಒಟ್ಟಾರೆ ಮೈಕ್ರೋ ಫೈನಾನ್ಸ್ ಗಳ ಹಾವಳಿಗೆ ಸರ್ಕಾರ ನಾನಾ ರೂಲ್ಸ್ಗಳನ್ನು ತಂದರೂ ಕೂಡ ಯಾವುದೇ ಪ್ರಯೋಜನ ಆಗ್ತಾ ಇಲ್ಲ. ಒಂದೇ ದಿನ ಮೈಕ್ರೋ ಫೈನಾನ್ಸ್ ಕಾಟಕ್ಕೆ ಒಂದೇ ಜಿಲ್ಲೆಯಲ್ಲಿ ಇಬ್ಬರು ಸಾವನ್ನಪ್ಪಿರೋದು ಮಾತ್ರ ದುರಂತವೇ ಸರಿ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಮೈಕ್ರೋ ಫೈನಾನ್ಸ್ಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಮೂಗುದಾರ ಹಾಕಬೇಕಿದೆ.