ತುಮಕೂರು :
ಜೂಜು ಅನ್ನೋದು ಅದೆಷ್ಟು ಮೋಜು ಕೊಡುತ್ತೋ ಅಷ್ಟೇ ನೋವನ್ನು ಕೂಡ ಕೊಡುತ್ತೆ, ಕೊನೆಗೆ ಸಾವಿನ ಮನೆಗೂ ತಳ್ಳಿಬಿಡುತ್ತೆ ಅನ್ನೋದಕ್ಕೆ ತುಮಕೂರಿನಲ್ಲಿ ನಡೆದಿರುವ ಈ ಘಟನೆಯೇ ಉದಾಹರಣೆ. ಅದು ಇಸ್ಪೀಟ್ ಇರಲಿ, ಬೆಟ್ಟಿಂಗ್ ಇರಲಿ ಅಥವಾ ಇನ್ಯಾವುದೋ ಇರಲಿ. ಮೊದ ಮೊದಲು ಸಖತ್ ಕಿಕ್ ಕೊಡುತ್ತೆ. ದುಡ್ಡಿನ ಆಸೆ ಹುಟ್ಟಿಸುತ್ತೆ. ಆದರೆ ಒಂದು ಸಾರಿ ಇದಕ್ಕೆಲ್ಲಾ ಅಡಿಕ್ಟ್ ಆಗ್ಬಿಟ್ರೆ ಮುಗೀತು. ನಿಮ್ಮ ಜೀವನವನ್ನೇ ಸರ್ವನಾಶ ಮಾಡಿಬಿಡುತ್ತೆ. ದುಡ್ಡಿನ ಆಸೆಗೆ ಬಿದ್ದು ಇಸ್ಪೀಟ್ ಆಡುವ ಗೀಳಿಗೆ ಬಿದ್ದವ ಲಕ್ಷ, ಲಕ್ಷ ಹಣವನ್ನು ಕಳೆದುಕೊಂಡಿದ್ದಲ್ಲದೇ ಇದೀಗ ತನ್ನ ಜೀವವನ್ನೇ ಕಳೆದುಕೊಂಡುಬಿಟ್ಟಿದ್ದಾನೆ.
ಇಸ್ಪೀಟ್ ಆಡಲು ಹೋಗಿ ಲಕ್ಷ ಲಕ್ಷ ಕಳೆದುಕೊಂಡಿದ್ದ ವ್ಯಕ್ತಿ ಸಾಲದ ಸುಳಿಯಲ್ಲಿ ಸಿಲುಕಿ ಕೊನೆಗೆ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ತುಮಕೂರು ನಗರದ ಶಾಂತಿನಗರದಲ್ಲಿ ನಡೆದಿರುವ ಘಟನೆಯಿದು. ೩೭ ವರ್ಷದ ಗಿರೀಶ್ ಸಾವಿಗೆ ಶರಣಾಗಿರುವ ವ್ಯಕ್ತಿ. ಗುಬ್ಬಿ ತಾಲೂಕಿನ ಚೇಳೂರಿನ ಕನ್ನಪ್ಪನ ಬೀದಿಯ ಮೂಲದವನಾಗಿರೋ ಗಿರೀಶ್ ತನ್ನ ಅಮ್ಮನೊಂದಿಗೆ ತುಮಕೂರಿನ ಕುಮಟಯ್ಯ ಬಡಾವಣೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದ. ವೃತ್ತಿಯಲ್ಲಿ ಚಾಲಕನಾಗಿದ್ದ ಗಿರೀಶ್, ಸೆಕೆಂಡ್ಸ್ ವಾಹನಗಳನ್ನು ವ್ಯಾಪಾರ ಮಾಡುವ ವ್ಯವಹಾರವನ್ನು ಕೂಡ ಮಾಡ್ತಾ ಇದ್ದ.
ಶಾಂತಿನಗರದ ಲತಾ ಎನ್ನುವವರ ಜೊತೆ ಸಂಪರ್ಕ ಹೊಂದಿದ್ದ ಗಿರೀಶ್, ಆಗಾಗ ಅವರ ಮನೆಗೆ ಹೋಗಿಬರ್ತಾ ಇದ್ದ. ಅದೇ ರೀತಿ ನಿನ್ನೆ ಸಾಯಂಕಾಲ ಕೂಡ ಲತಾ ಅವರ ಮನೆಗೆ ಹೋಗಿದ್ದವ ಅವರ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾನೆ.
ಲತಾ ಮನೆಗೆ ಹೋಗಿದ್ದ ಗಿರೀಶ್ ಇಸ್ಪೀಟ್ ಆಟವಾಡಿ ಲಕ್ಷ ಲಕ್ಷ ರೂಪಾಯಿ ಕಳೆದುಕೊಂಡಿರುವುದಾಗಿ ಹೇಳಿಕೊಂಡಿದ್ದನಂತೆ. ಕಾರು ಮಾರಾಟ ಮಾಡಿಸಿದ್ದ ಹಣವನ್ನು ಇಸ್ಪೀಟ್ ನಲ್ಲಿ ಸೋತಿದ್ದೀನಿ. ಹೀಗಾಗಿ ಜೀವನದಲ್ಲಿ ತುಂಬಾ ಬೇಸರಗೊಂಡಿದ್ದೀನಿ. ನಾನು ಬದುಕಲ್ಲ, ಸಾಯ್ತೀನಿ ಅಂತಾ ಹೇಳಿ ಒಂದು ಬಾರಿ ಅವರ ಮನೆಯ ರೂಮಿನಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದ್ದು. ಆಗ ಲತಾ ಬುದ್ಧಿ ಹೇಳಿ ಬಿಡಿಸಿದ್ದು, ನಂತರ ಎಲ್ಲವೂ ಸರಿಯಾಗುತ್ತೆ ದೇವಾಲಯಕ್ಕೆ ಹೋಗಿ ಬರೋಣ ಅಂತಾ ಗಿರೀಶ್‌ಗೆ ಲತಾ ಹೇಳಿದ್ದಳಂತೆ. ನಾನು ಕುಡಿದಿದ್ದೀನಿ, ದೇವಸ್ಥಾನಕ್ಕೆ ಬರಲ್ಲಾ ಅಂತಾ ಗಿರೀಶ್ ಹೇಳಿದ್ರೂ ಕೂಡ ಲತಾ, ಏನೂ ಆಗಲ್ಲ, ದೇವಸ್ಥಾನಕ್ಕೆ ಹೋಗಿಬರೋಣ ಅಂತಾ ಹೇಳಿ ಮುಖ ತೊಳೆದುಕೊಂಡು ಬರ್ತೀನಿ ಅಂತಾ ಹೇಳಿ ಬಾತ್ ರೂಂಗೆ ಹೋಗಿದ್ದಾಗ ಗಿರೀಶ್ ಇನ್ನೊಂದು ರೂಮಿಗೆ ಹೋಗಿ ಡೋರ್ ಲಾಕ್ ಮಾಡಿಕೊಂಡು ರೂಮ್‌ನಲ್ಲಿದ್ದ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಲತಾ ವಾಪಾಸ್ ಬಂದು ನೋಡಿದಾಗ ಗಿರೀಶ್ ಮತ್ತೊಂದು ರೂಮ್‌ನ ಡೋರ್ ಲಾಕ್ ಮಾಡಿಕೊಂಡಿದ್ದು ಗೊತ್ತಾಗಿದೆಯಂತೆ. ಈ ವೇಳೆ ಅಕ್ಕಪಕ್ಕದ ಮನೆಯವರನ್ನು ಕೂಗಿ ಕರೆದು, ಎಲ್ಲರೂ ಸೇರಿ ಬಾಗಿಲನ್ನು ಒಡೆದು ನೋಡಿದಾಗ ಗಿರೀಶ್ ಸೀಲಿಂಗ್ ಪ್ಯಾನಿಗೆ ಸೀರೆಯ ಸಹಾಯದಿಂದ ನೇಣು ಹಾಕಿಕೊಂಡಿದ್ದು, ಬಳಿಕ ಆತನನ್ನು ಕೆಳಗಿಳಿಸಿ ನೋಡಿದಾಗ ಇನ್ನೂ ಉಸಿರಾಡುತ್ತಿರುವುದು ಗೊತ್ತಾಗಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರಂತೆ. ಆದರೆ ಪರೀಕ್ಷೆ ನಡೆಸಿದ ವೈದ್ಯರು ಗಿರೀಶ್ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.
ಬೆಳಿಗ್ಗೆ ಮನೆಯಲ್ಲಿ ಚಿತ್ರಾನ್ನ ತಿಂದುಕೊಂಡು ಹೋದವನು ಇದೀಗ ಶವಾಗಾರದಲ್ಲಿ ಮಲಗಿದ್ದಾನೆ. ನನ್ನ ಬಳಿ ಸಾಲದ ಬಗ್ಗೆ ಏನನ್ನೂ ಹೇಳಿರಲಿಲ್ಲ. ಈಗ ನೋಡಿದ್ರೆ ಬೇರೆಯವರ ಮನೆಯಲ್ಲಿ ಹೋಗಿ ಸತ್ತಿದ್ದಾನೆ. ಅಮ್ಮ ನಿನ್ನ ನಾನು ಸಾಕ್ತೀನಿ ಅಂತಿದ್ದ. ಆದ್ರೀಗ ನನ್ನೊಬ್ಬಳನ್ನೇ ಬಿಟ್ಟು ಹೋಗಿದ್ದಾನೆ ಅಂತಾ ಮಗನನ್ನು ಕಳೆದುಕೊಂಡ ತಾಯಿ ಕಣ್ಣೀರಿಟ್ಟಿದ್ದಾರೆ. ಇನ್ನು ಗಿರೀಶ್ ಸಹೋದರ ಕೂಡ ತಮ್ಮನನ್ನು ಕಳೆದುಕೊಂಡು ಕಣ್ಣೀರಿಟ್ಟಿದ್ದಾರೆ. ಡ್ರೈವರ್ ಆಗಿ ಕೆಲಸ ಮಾಡ್ತಿದ್ದ, ನಾನು ಹಣ ಕೇಳಿದರೂ ಆತನೇ ಕೊಡ್ತಿದ್ದ. ಆದರೆ ಆತನ ವ್ಯವಹಾರದ ಬಗ್ಗೆ ನನಗೇನು ಹೇಳ್ತಿರಲಿಲ್ಲ ಅಂತಾ ಹೇಳಿದ್ದಾರೆ.
ಒಟ್ಟಿನಲ್ಲಿ ಜೂಜಿನ ಮೋಜಿಗೆ ಬಿದ್ದು ಈ ಗಿರೀಶ್ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದು ಮಾತ್ರ ದುರಂತವೇ ಸರಿ.