ತುಮಕೂರು : ಶವ ಸಂಸ್ಕಾರ ನಡೆಸುವ ಯಶೋಧಾಳ ಯಶೋಗಾಥೆ

ದಿಟ್ಟ ಮಹಿಳೆ ಯಶೋಧಮ್ಮ
ದಿಟ್ಟ ಮಹಿಳೆ ಯಶೋಧಮ್ಮ
ತುಮಕೂರು

ತುಮಕೂರು:

ಇಂದು ವಿಶ್ವ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ಹೆಣ್ಣು ಸಂಸಾರದ ಕಣ್ಣು, ಮನೆಯ ಬೆಳಕು ಅಷ್ಟೇ ಅಲ್ಲ ಜೀವನಕ್ಕಾಗಿ, ತನ್ನವರಿಗಾಗಿ ಎಂಥಹ ದಿಟ್ಟ ಕೆಲಸಕ್ಕಾದರೂ ಸೈ ಎನ್ನುತ್ತಾಳೆ. ನಾವಿಂದು ವಿಶಿಷ್ಟ ಮಹಿಳೆಯೊಬ್ಬರನ್ನು ಪರಿಚಯಿಸುತ್ತಿದ್ದೇವೆ, ಇವರನ್ನು ನೋಡಿದರೆ ಬೆರಗಾಗೋದು ಪಕ್ಕಾ. ಅವರು ಎಲ್ಲರೂ ಮಾಡೋವಂತಹ ಕೆಲಸವನ್ನು ಮಾಡಲ್ಲ, ಇವರ ಕೆಲಸ ಕಂಡವರು ಇವರಿಗೆ ಭಯ ಆಗಲ್ವಾ…? ಅಂಜಿಕೆ ಆಗಲ್ವಾ ಅಂತಾ ಹೇಳಿದ್ದು ಉಂಟು ಆದರೆ ಅದನ್ನೆಲ್ಲ ಮೆಟ್ಟಿ ನಿಂತ ದಿಟ್ಟ ಮಹಿಳೆ ಈ ನಾರಿ. ಹುಟ್ಟಿದ ಮನುಷ್ಯ ಸಾಯಲೇ ಬೇಕು. ಸಾವು ಅಂದರೆ ಎಲ್ಲರೂ ಭಯ ಪಡ್ತಾರೆ. ಶವ ಅಂದರೆ ಸಾಕು ಮಹಿಳೆಯರು ಸಾಮಾನ್ಯವಾಗಿ ಭಯ ಪಡ್ತಾರೆ. ಅಂತದರಲ್ಲಿ ಇವರು ಸ್ಮಶಾನದಲ್ಲಿ ಶವಗಳಿಗೆ ಮುಕ್ತಿ ಕೊಡಿಸುವುದೇ ಇವರ ಕಾಯಕವಾಗಿದೆ, ಹೌದು ಈಕೆಯ ಹೆಸರು ಯಶೋಧಮ್ಮ ಅಂತಾ. ಸ್ಮಶಾನಕ್ಕೆ ಬಂದ ಶವಗಳನ್ನು ಮುಕ್ತಿ ಕೊಡಿಸುವ ಕೆಲಸವನ್ನು ಮಾಡ್ತಾರೆ. ಇದರಲ್ಲಿ ಬಂದ ಹಣದಿಂದಲೇ ಜೀವನ ಸಾಗಿಸ್ತಾ ಇದ್ದಾರೆ. ಇನ್ನು ಸ್ಮಶಾನಕ್ಕೆ ಬಡ ಕುಟುಂಬಗಳ ಶವ ಏನಾದರೂ ಬಂದರೆ ಅವರಿಂದ ಒಂದೇ ಒಂದು ರೂಪಾಯಿಯನ್ನು ಪಡೆಯದೇ ಶವಗಳಿಗೆ ಮುಕ್ತಿ ಕೊಡಿಸಿ ಮಾನವೀಯತೆಯನ್ನ ಮೆರೆದಿದ್ದಾರೆ.

ತುಮಕೂರು ನಗರ ನಿವಾಸಿಯಾದ ಯಶೋಧಮ್ಮ ಅವರ ಪತಿ ಶವ ಸುಡುವ ಕಾಯಕವನ್ನು ಮಾಡಿಕೊಂಡು ಬರ್ತಾ ಇದ್ದಾರೆ. ಆಗಿನಿಂದ ಶವ ಸುಡುವ ಕಾಯಕಕ್ಕೆ ಯಶೋಧಮ್ಮ ಗಂಡನಿಗೆ ಸಾಥ್‌ ನೀಡ್ತಾ  ಇದ್ದಳು. ಆದರೆ ಕಳೆದ ನಾಲ್ಕು ವರ್ಷಗಳ ಹಿಂದಷ್ಟೇ ಆಕೆಯ ಗಂಡ ಸಾವನ್ನಪ್ಪಿದ್ದರು. ಪತಿ ಸಾವನ್ನಪ್ಪಿದ ಬಳಿಕವೂ ಶವ ಸುಡುವ ಕಾಯಕವನ್ನು ಯಶೋಧಮ್ಮ ಮುಂದುವರೆಸಿಕೊಂಡು ಬಂದಿದ್ದರು. ಕಳೆದ ಮೂರು-ನಾಲ್ಕು ವರ್ಷಗಳಿಂದ ಗಾರ್ಡನ್ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಶವಗಳಿಗೆ ಮುಕ್ತಿ ಕೊಡುವ ಕೆಲಸ ಮಾಡ್ತಾ ಇದ್ದು, ಶವದಹನದ ನಂತರ ಚಿತಾಭಸ್ಮವನ್ನು ಸಂಗ್ರಹಿಸಿ ಮನೆಯವರಿಗೆ ಕೊಡುವ ತನಕ ಎಲ್ಲಾ ರೀತಿಯ ಕಾರ್ಯಗಳನ್ನು ಸರಾಗವಾಗಿ ನೆರವೇರಿಸುತ್ತಾರೆ.  ಒಂದು ಶವಕ್ಕೆ ಮುಕ್ತಿ ಕೊಡಿಸಿದರೆ 2,500 ರಿಂದ 3 ಸಾವಿರ ಹಣವನ್ನು ಕೊಡ್ತಾರೆ, ಈ ಹಣದಲ್ಲೇ ಅವರ ಜೀವನ, ತಮ್ಮ ಮಕ್ಕಳಿಗೆ ಶಿಕ್ಷಣಕ್ಕೆ ಬಳಸ್ತಾರೆ. ಇದಿಷ್ಟಲ್ಲದೇ ಬಡ ಕುಟುಂಬಗಳು ಏನಾದರೂ ಇಲ್ಲಿ ಶವ ಸಂಸ್ಕಾರ ಮಾಡಲು ಬಂದರೆ ಅವರಿಂದ ಬಿಡುಗಾಸನ್ನು ಕೂಡ ಪಡೆಯದೇ ಉಚಿತವಾಗಿ ಶವಕ್ಕೆ ಮುಕ್ತಿ ಕೊಡಿಸುತ್ತಾರೆ.

ಇನ್ನು ಶವ ಸಂಸ್ಕಾರಕ್ಕೆ ಬರುವವರಲ್ಲಿ ಕೆಲವರು ಹಣವನ್ನು ಕೊಡುತ್ತಾರೆ. ಕೆಲವರು ಕೊಡೋದಿಲ್ಲ. ಆದರೂ ಕೂಡ ಹಣಕ್ಕೆ ಬೇಡಿಕೆ ಇಡದೇ ತಮ್ಮ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಿ, ಶವವನ್ನು ದಹಿಸಿ, ಚಿತಾಭಸ್ಮವನ್ನು ಮನೆಯವರಿಗೆ ನೀಡಿ ಕಳುಹಿಸುತ್ತಾರೆ. ಬೇರೆ ಕೆಲಸಕ್ಕೆ ಹೋದರೆ ಜಾಸ್ತಿ ಸಂಬಳವೇ ಸಿಗುತ್ತೆ, ಆದರೆ ಮೂಲ ಕಾಯಕವನ್ನು ಬಿಡಬಾರದು ಎಂದು ಈ ಕೆಲಸ ಮಾಡುತ್ತೀದ್ದೇನೆ. ಏನೇ ಕಷ್ಟ ಬಂದರೂ ಕೂಡ ನಾನು ಶವದಹನ ಕಾರ್ಯವನ್ನು ಬಿಡುವುದಿಲ್ಲ ಅಂತಿದ್ದಾರೆ ಛಲವಂತೆ ಯಶೋಧಮ್ಮ.  

ವಂಶಪಾರಂಪರ್ಯವಾಗಿ ಬಂದ ವೃತ್ತಿಯನ್ನು ಗಂಡನ ಅಗಲಿಕೆಯ ನಂತರೂ ಮುಂದುವರೆಸುತ್ತಿರೋದು ಶ್ಲಾಘನೀಯ, ಇಂತಹ ಮಹನೀಯ ದಿಟ್ಟ ಮಹಿಳೆ ಯಶೋಧಮ್ಮ ಅವರನ್ನು ಜಿಲ್ಲಾಡಳಿತ ಗುರುತಿಸುವ ಕೆಲಸ ಮಾಡಿಲ್ಲ, ಆದರೆ ಇವರ ಸೇವೆಯನ್ನು ಗುರುತಿಸಿ ಮಹಿಳಾ ದಿನಾಚರಣೆಯಂದು ಮಹಿಳಾ ಸಾಂತ್ವನ ಕೇಂದ್ರದ ವತಿಯಿಂದ ಸನ್ಮಾನ ಮಾಡುತ್ತಿರುವುದು ಹರ್ಷದ ಸಂಗತಿ. ಹೆಣ್ಣಾಗಲಿ, ಗಂಡಾಗಲಿ ಒಂದು ದಿನ ಸಾಯಲೇಬೇಕು. ಆದ್ದರಿಂದ ಶವ ದಹನ ಕೆಲಸ ಮಾಡಲು ನಮಗೆ ಯಾವುದೇ ರೀತಿಯ ಮುಜುಗರ ಇಲ್ಲ ಅಂತಿರೋ ಈ ದಿಟ್ಟ ಮಹಿಳೆಗೆ ಮಹಿಳಾ ದಿನಾಚರಣೆಯಂದು ಒಂದು ಸಲ್ಯೂಟ್‌ ಹೊಡೆಯಲೇಬೇಕು.  

Author:

...
Editor

ManyaSoft Admin

Ads in Post
share
No Reviews