ಸ್ಮಾರ್ಟ್ ಸಿಟಿ ಖ್ಯಾತಿಗೆ ಪಾತ್ರವಾಗಿರೋ ತುಮಕೂರಿನಲ್ಲಿ ಫುಟ್ ಪಾತ್ ಒತ್ತುವರಿ ಸಮಸ್ಯೆ ಹೆಚ್ಚಾಗ್ತಿರೋ ಬಗ್ಗೆ ನಿಮ್ಮ ಪ್ರಜಾಶಕ್ತಿ ಟಿವಿ ನಿರಂತರ ವರದಿಯನ್ನ ಮಾಡುತ್ತಲೇ ಬರುತ್ತಿದೆ. ಈ ಬಗ್ಗೆ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತರುವ ಕೆಲಸವನ್ನ ಕೂಡ ಮಾಡಲಾಗಿತ್ತು. ಬಳಿಕ ಎಚ್ಚೆತ್ತುಕೊಂಡಿದ್ದ ಅಧಿಕಾರಿಗಳು ಈ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ರು. ಆದ್ರೆ ದಶಕಗಳಿಂದ ವ್ಯಾಪಾರ ಮಾಡಿಕೊಂಡು ಬಂದಿದ್ದ ಬೀದಿಬದಿ ವ್ಯಾಪಾರಸ್ಥರನ್ನ ಒಂದು ನೋಟಿಸ್ ಕೂಡ ನೀಡದೇ ಏಕಾಏಕಿ ಎತ್ತಂಗಡಿ ಮಾಡುವ ಕೆಲಸ ಮಾಡಿದ್ರು. ಇದರಿಂದ ಬೀದಿಬದಿ ವ್ಯಾಪಾರಸ್ಥರು ಕಂಗಾಲಾಗಿದ್ರು.
ಹೌದು... ತುಮಕೂರು ನಗರದ ಅಶೋಕ ರಸ್ತೆಯ ಎರಡೂ ಕಡೆಗಳಲ್ಲಿ ಬೀದಿಬದಿ ವ್ಯಾಪಾರಸ್ಥರು ಕಳೆದ ೪೦-೫೦ ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಬರ್ತಿದ್ದಾರೆ. ಇವರಿಗೆ ಪಾಲಿಕೆಯಿಂದ ನೋಟೀಸ್ ಕೂಡ ನೀಡದೇ, ಮೊನ್ನೆ ಏಕಾಏಕಿ ಅಂಗಡಿಗಳನ್ನ ತೆರವುಗೊಳಿಸುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗಿದ್ರು. ಪಾಲಿಕೆ ಅಧಿಕಾರಿಗಳ ಈ ನಡೆಯ ವಿರುದ್ಧ ಬೀದಿಬದಿ ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದ್ರು. ಈ ಬಗ್ಗೆ ನಿಮ್ಮ ಪ್ರಜಾಶಕ್ತಿ ವರದಿಯನ್ನ ಕೂಡ ಬಿತ್ತರಿಸಿತ್ತು. ಇದೀಗ ನೂರಾರು ಬೀದಿಬದಿ ವ್ಯಾಪಾರಸ್ಥರು ಮಹಾನಗರ ಪಾಲಿಕೆ ಮುಂದೆ ಜಮಾಯಿಸಿ ಪಾಲಿಕೆ ಆಯುಕ್ತರಿಗೆ ಮನವಿ ಕೊಡುವ ಕೆಲಸ ಮಾಡಿದ್ರು.
ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜಾ ಅವರ ಮುಂದೆ ತಮ್ಮ ಕಷ್ಟಗಳನ್ನ ಹೇಳಿಕೊಂಡ್ರು. ನಮ್ಮಿಂದ ಯಾವುದೇ ರೀತಿ ಟ್ರಾಫಿಕ್ ಜಾಮ್ ಸಮಸ್ಯೆ ಆಗ್ತಿಲ್ಲ. ಇಲ್ಲಿ 3-4 ಆಟೋ ಸ್ಟ್ಯಾಂಡ್ ಗಳು ಇವೆ. ಆದ್ದರಿಂದ ಟ್ರಾಫಿಕ್ ಜಾಮ್ ಆಗ್ತಾ ಇದೆ. ನಮಗೆ ಬೇರೆ ಕಡೆ ವ್ಯಾಪಾರ ಆಗುವುದಿಲ್ಲ. ಹೀಗಾಗಿ ನಮಗೆ ಅದೇ ಸ್ಥಳದಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡಬೇಕು ಎಂದು ತಮ್ಮ ಅಳಲನ್ನ ತೋಡಿಕೊಂಡರು.
ಮಹಾನಗರ ಪಾಲಿಕೆ ಆಯುಕ್ತೆ ಬಿ. ವಿ.ಅಶ್ವಿಜಾ, ಯಾವುದೇ ಕಾರಣಕ್ಕೂ ಏಕಾಏಕಿ ತೆರವು ಮಾಡಿಸಿಲ್ಲ. ಇದಕ್ಕೂ ಮುನ್ನ ಹಲವು ಬಾರಿ ಅವರನ್ನ ಸಭೆ ಕರೆದು ತೆರವು ಮಾಡುವಂತೆ ಸೂಚನೆ ನೀಡಿದ್ದೇವೆ. ಅದೇ ಜಾಗದ ಹಿಂಭಾಗದಲ್ಲಿ ಅವರಿಗೆ ವ್ಯಾಪಾರ ಮಾಡಲು ಅನುಕೂಲ ಮಾಡಿಕೊಡುತ್ತೇವೆ ಅಂತಾ ತಿಳಿಸಿದರು.