ತುಮಕೂರು :
ದಶಕಗಳ ಇತಿಹಾಸವಿರುವ ತುಮಕೂರಿನ ಆ ಶಾಲೆಯ ಕಟ್ಟಡ ಇನ್ನೇನು ಬಿದ್ದೇಹೋಗುವ ಸ್ಥಿತಿಗೆ ಬಂದು ತಲುಪಿತ್ತು. ಆ ಶಾಲೆಯನ್ನು ಕೆಡವಿಯೇ ಬಿಡೋಣ ಅಂತಾ ಜಿಲ್ಲಾಡಳಿತ ಕೂಡ ಒಂದು ಹೆಜ್ಜೆಯನ್ನು ಮುಂದೆ ಇಟ್ಟಿಯೇ ಬಿಟ್ಟಿತ್ತು. ಆದರೆ ಸ್ಥಳೀಯರು, ಪೋಷಕರ ಹೋರಾಟದ ಪರಿಣಾಮ, ಜೊತೆಗೆ ಆ ಸಂಸ್ಥೆಯ ಪರಿಶ್ರಮದಿಂದಾಗಿ ಆ ಶಾಲೆಗೆ ಇದೀಗ ಹೊಸ ಲುಕ್ ಸಿಕ್ಕಿದೆ. ಸರ್ಕಾರದ ಕೈಯಲ್ಲಿ ಮಾಡೋದಕ್ಕೆ ಆಗದ ಕೆಲಸವನ್ನು ಸಂಘ ಸಂಸ್ಥೆಗಳ ನೆರವಿನಿಂದ ಸ್ಥಳೀಯರು ಮಾಡಿ ತೋರಿಸಿದ್ದಾರೆ.
ತುಮಕೂರಿನ ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿರುವ ಎಂಎಆರ್‌ಪಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿತ್ತು. ಪೊಲೀಸರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಅನ್ನೋ ಉದ್ದೇಶದಿಂದ ಮೈಸೂರು ಸಂಸ್ಥಾನ ಆಡಳಿತದ ಕಾಲದಲ್ಲೇ ಈ ಶಾಲೆಯನ್ನು ನಿರ್ಮಿಸಲಾಗಿತ್ತು. ಆದರೆ ಇತ್ತೀಚೆಗೆ ಪೊಲೀಸರು ತಮ್ಮ ಮಕ್ಕಳನ್ನು ಇಲ್ಲಿಗೆ ಕಳುಹಿಸೋದು ಕಡಿಮೆಯಾದ ಬಳಿಕ ಸ್ಥಳೀಯ ಮಕ್ಕಳು ಇಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದರು. ಜೊತೆಗೆ ಶಿಕ್ಷಣ ಇಲಾಖೆ ಈ ಶಾಲೆಯ ಉಸ್ತುವಾರಿಯನ್ನು ನೋಡಿಕೊಳ್ತಿತ್ತು. ಆದರೆ ಈ ಸರ್ಕಾರಿ ಶಾಲೆಗೆ ಯಾವುದೇ ಅನುದಾನ ಬಾರದೇ ಇದ್ದುದರಿಂದ ಹರಕಲು ಗೋಡೆ, ಮುರುಕಲು ಸೂರಿನ ಅಡಿಯಲ್ಲಿಯೇ ಪಾಠ ನಡೆಯುತ್ತಿತ್ತು. ಅನೇಕ ವರ್ಷದಿಂದ ಸುಣ್ಣಬಣ್ಣವನ್ನೂ ಕಾಣದೇ ಯಾವುದೋ ಭೂತಬಂಗಲೆಯಂತೆ ಕಾಣಿಸ್ತಿತ್ತು ಈ ಶಾಲೆಯ ಕಟ್ಟಡ. ಆದರೆ ಇದೀಗ ಈ ಶಾಲೆ ಫಳಫಳ ಹೊಳೆಯುತ್ತಿದೆ.
ಇದಕ್ಕೆಲ್ಲ ಕಾರಣವಾಗಿರೋದು ಪೋಷಕರು, ಸ್ಥಳೀಯರು ಮತ್ತು ಬೆಂಗಳೂರು ಮೂಲದ ವೇ ಫಾರ್ ಲೈಫ್ ಸಂಸ್ಥೆ. ರಾಜಕಾರಣಿಗಳು ಮತ್ತು ಅಧಿಕಾರಿಗಳು ಮಾತೇತ್ತಿದ್ರೆ ಸಾಕು ಸರ್ಕಾರಿ ಶಾಲೆ ಉಳಿಯಬೇಕು, ಸರ್ಕಾರಿ ಬೆಳೆಯಬೇಕು ಅನ್ನೋ ಮಾತುಗಳನ್ನಾಡ್ತಾರೆ. ಆದರೆ ವಾಸ್ತವದಲ್ಲಿ ಅವರಿಗೆ ಸರ್ಕಾರಿ ಶಾಲೆಗಳನ್ನು ಉಳಿಸುವ ಯಾವುದೇ ಆಸಕ್ತಿ ಇರೋದಿಲ್ಲ. ಹೀಗಾಗಿ ಎನ್‌ಜಿಓ ಸಂಸ್ಥೆಯಾಗಿರೋ ವೇ ಫಾರ್ ಲೈಫ್ ಅನ್ನೋ ಸಂಸ್ಥೆ ತುಮಕೂರಿನ ಈ ಎಂಎಆರ್‌ಪಿ ಶಾಲೆಯನ್ನು ಸ್ವಚ್ಛಗೊಳಿಸಿ ಸುಣ್ಣಬಣ್ಣ ಹೊಡೆಸಿ, ಗೋಡೆಗಳ ಮೇಲೆ ವರ್ಣಚಿತ್ರಗಳನ್ನು ಬರೆದು ಸಿಂಗಾರಗೊಳಿಸಿದೆ.
ಈ ಸಂಸ್ಥೆಯ ಸ್ವಯಂಸೇವಕರು ಸ್ವಯಂಪ್ರೇರಿತವಾಗಿ ಶಾಲೆಗೆ 50 ಲೀಟರ್ ಬಣ್ಣ ಬಳಸಿಕೊಂಡು ಸರ್ಕಾರಿ ಶಾಲೆಗೆ ಹೊಸ ರೂಪವನ್ನು ತರಲು ಮುಂದಾಗಿದೆ. ಎರಡು ದಿನಗಳಿಂದ ಸುಣ್ಣಬಣ್ಣ ಬಳಿಯಲಾಗಿದ್ದು, ಶಾಲೆಯ ಗೋಡೆ ಸೇರಿದಂತೆ ಶಾಲಾ ಮೈದಾನಕ್ಕೆ ತೆರಳುವ ರಸ್ತೆಯ ಬದಿಯ ಗೋಡೆಗಳ ಮೇಲೆ ವರ್ಲಿ ಚಿತ್ರಕಲೆ, ಸಾಮಾಜಿಕ ಕಳಕಳಿಯನ್ನು ಬಿಂಬಿಸುವ ಚಿತ್ರಕಲೆಗಳನ್ನು ಬಿಡಿಸಿ ಗೋಡೆಗಳ ಅಂದವನ್ನು ದ್ವಿಗುಣಗೊಳಿಸುವ ಕೆಲಸ ಮಾಡಿದ್ದಾರೆ.
ವೇ ಫಾರ್ ಲೈಫ್ ಸಂಸ್ಥೆಯ ಉಪಾಧ್ಯಕ್ಷ ಲತೀಶ್, ನಮ್ಮ ಸಂಸ್ಥೆ ವತಿಯಿಂದ ಸ್ವಯಂಪ್ರೇರಿತವಾಗಿ ಈ ಶಾಲೆಗೆ ಬಣ್ಣ ಹಚ್ಚುವ ಕೆಲಸ ಮಾಡಿದ್ದೇವೆ. 50ಕ್ಕೂ ಹೆಚ್ಚು ಸ್ವಯಂಸೇವಕರು ಈ ಕೆಲಸದಲ್ಲಿ ಭಾಗಿಯಾಗಿದ್ದಾರೆ. ಕರ್ನಾಟಕದಾದ್ಯಂತ 30ಕ್ಕೂ ಹೆಚ್ಚು ಶಾಲೆಗಳನ್ನು ಅಭಿವೃದ್ಧಿಪಡಿಸಿದ್ದೇವೆ. ತುಮಕೂರಿನಲ್ಲಿ ಈ ಶಾಲೆಯನ್ನು ಮೊದಲಿಗೆ ಆಯ್ಕೆ ಮಾಡಿಕೊಂಡು ಶಾಲೆಯ ಅಭಿವೃದ್ಧಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಮೀನಾಕ್ಷಿ ಮಾತನಾಡಿ, ಸರ್ಕಾರದಿಂದ ಯಾವುದೇ ಅನುದಾನ ಈ ಶಾಲೆಗೆ ಬರುತ್ತಿಲ್ಲ. ಕೇವಲ ದಾನಿಗಳು ಮಾಡಿಸಿದ್ದಾರೆ. ಸಾಕಷ್ಟು ವರ್ಷಗಳಿಂದ ಈ ಶಾಲೆಗೆ ಸುಣ್ಣ ಬಣ್ಣ ಹೊಡೆಸಿರಲಿಲ್ಲ. ಆದರೆ ವೇ ಫಾರ್ ಲೈಫ್ ಸಂಸ್ಥೆ ಒಂದೇ ಒಂದು ಕರೆಗೆ ಬಂದು ಶಾಲೆಗೆ ಸುಣ್ಣಬಣ್ಣ ಹೊಡೆದುಕೊಟ್ಟಿದ್ದಾರೆ. ನಮ್ಮ ಶಾಲೆ ಈಗ ತುಂಬಾ ಸುಂದರವಾಗಿ ಕಾಣ್ತಾ ಇದೆ ಅಂತಾ ಖುಷಿಪಟ್ಟರು.
ಒಟ್ಟಿನಲ್ಲಿ ಇನ್ನೇನು ಮುಚ್ಚೇ ಹೋಗುತ್ತೆ ಅಂದುಕೊಂಡಿದ್ದ ಶಾಲೆ ಈಗ ಕಲರ್‌ಫುಲ್ ಲುಕ್‌ನಲ್ಲಿ ಕಂಗೊಳಿಸುತ್ತಿದ್ದು, ಪೋಷಕರು ಮತ್ತು ಶಾಲೆಯ ವಿದ್ಯಾರ್ಥಿಗಳು ಕೂಡ ಖುಷ್ ಆಗಿದ್ದಾರೆ.