ತುಮಕೂರು : ತುಮಕೂರಿಗೆ ಆಗಮಿಸಿದ ಭೀಮ ಹೆಜ್ಜೆ ಜಾಗೃತಿ ಜಾಥಾ ರಥ ಯಾತ್ರೆ

ತುಮಕೂರು :

ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ನಿಪ್ಪಾಣಿಗೆ ಭೇಟಿಕೊಟ್ಟು ೧೦೦ ವರ್ಷ ತುಂಬಿದ ಹಿನ್ನೆಲೆ ಬೆಂಗಳೂರಿನಿಂದ ಬೆಳಗಾವಿಯ ನಿಪ್ಪಾಣಿಯವರೆಗೆ ನಡೆಯುತ್ತಿರುವ ಭೀಮ ಹೆಜ್ಜೆ ರಥಯಾತ್ರೆ ತುಮಕೂರಿಗೆ ಆಗಮಿಸಿದ್ದು, ತುಮಕೂರಿನಲ್ಲಿ ಈ ರಥಯಾತ್ರೆಗೆ ಅದ್ದೂರಿ ಸ್ವಾಗತ ಕೋರಲಾಯಿತು.

ಕೋಲಾರ ಮಾಜಿ ಸಂಸದ ಮುನಿಸ್ವಾಮಿ ನೇತೃತ್ವದಲ್ಲಿ ಭೀಮ ಹೆಜ್ಜೆ ರಥ ಯಾತ್ರೆ ಸಾಗುತ್ತಿದ್ದು, ಸಾಮಾಜಿಕ ನ್ಯಾಯಕ್ಕಾಗಿ ಬಲಿಷ್ಠ ನಾಯಕತ್ವ ಹೆಸರಿನಲ್ಲಿ ರಥಯಾತ್ರೆ ನಡೆಯುತ್ತಿದೆ. ಏಪ್ರಿಲ್ 11ರಿಂದ ಆರಂಭವಾಗಿರುವ ರಥಯಾತ್ರೆ ಏಪ್ರಿಲ್‌ 15 ವರೆಗೆ ಸಾಗಲಿದೆ. ಬೆಂಗಳೂರಿನಿಂದ ಆರಂಭಗೊಂಡಿದ್ದ ರಥಯಾತ್ರೆ ನೆಲಮಂಗಲ, ಡಾಬಸ್ ಪೇಟೆ, ಬಟವಾಡಿ, ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತ ಹಾಗೂ ಭದ್ರಮ್ಮ ಸರ್ಕಲ್ ಮಾರ್ಗವಾಗಿ ತುಮಕೂರಿನ ಟೌನ್ ಹಾಲ್ ಬಂದು ತಲುಪಿತು. ರಥಯಾತ್ರೆಯನ್ನು ಬಿಜೆಪಿ ಶಾಸಕರಾದ ಜ್ಯೋತಿಗಣೇಶ್‌ ಮತ್ತು ಸುರೇಶ್‌ ಗೌಡ ನೇತೃತ್ವದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಸ್ವಾಗತಿಸಿದರು. ಟೌನ್‌ ಹಾಲ್‌ ಆವರಣದಲ್ಲಿ ಬಹಿರಂಗ ಸಭೆಯನ್ನು ನಡೆಸಲಾಯಿತು.

ಇನ್ನು ಈ ವೇಳೆ ಬಿಜೆಪಿ ಕಾರ್ಯಕರ್ತರು ಬೈಕ್‌ ರ್ಯಾಲಿ ನಡೆಸಿ ಸಂಭ್ರಮಿಸಿದರು. ಬಳಿಕ ಮಾತನಾಡಿದ ಬಿಜೆಪಿ ನಾಯಕರು ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸಿದರು.

ಒಟ್ಟಿನಲ್ಲಿ ಭೀಮ ಹೆಜ್ಜೆ ರಥಯಾತ್ರೆಗೆ ತುಮಕೂರಿನಲ್ಲಿ ಅದ್ದೂರಿ ಸ್ವಾಗತ ದೊರೆತಿದ್ದು, ತುಮಕೂರಿನಿಂದ ಶಿರಾ, ಹಿರಿಯೂರು ಮಾರ್ಗವಾಗಿ ಸಾಗಿ ಚಿತ್ರದುರ್ಗವನ್ನು ತಲುಪಲಿದೆ.

Author:

share
No Reviews