ತುಮಕೂರು :
ನಮ್ಮ ಭಾರತೀಯ ಹಿಂದೂ ಸಂಸ್ಕೃತಿಯಲ್ಲಿ ಗೋಮಾತೆಗೆ ಪೂಜ್ಯ ಸ್ಥಾನವನ್ನು ನೀಡಲಾಗಿದೆ. ಹಬ್ಬ ಹರಿದಿನಗಳಲ್ಲಿ, ಗೃಹಪ್ರವೇಶದಂತಹ ಸಂದರ್ಭದಲ್ಲಿ ಗೋಮಾತೆಯನ್ನು ಮನೆಗೆ ಪ್ರವೇಶಿಸಿ, ವಿಶೇಷ ಪೂಜೆ ಸಲ್ಲಿಸೋದು ವಾಡಿಕೆ. ಅಷ್ಟರ ಮಟ್ಟಿಗೆ ಗೋವನ್ನು ದೇವರ ಸ್ವರೂಪವಾಗಿ ಪೂಜಿಸೋ ಸಂಸ್ಕೃತಿ ನಮ್ಮದು. ಹೀಗಾಗಿಯೇ ನಮ್ಮ ದೇಶದಲ್ಲಿ ಸದ್ಯ ಗೋಹತ್ಯೆ ನಿಷೇಧ ಕಾಯ್ದೆ ಕೂಡ ಜಾರಿಯಲ್ಲಿದೆ. ಆದರೂ ಕೂಡ ಕೆಲವರು ಗೋಹತ್ಯೆಯನ್ನು ಮಾಡುತ್ತಲೇ ಇದ್ದಾರೆ. ಅಕ್ರಮ ಗೋ ಮಾಂಸ ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಂಡರೂ ಕೂಡ ಅಲ್ಲಲ್ಲಿ ಎಗ್ಗಿಲ್ಲದೇ ಅಕ್ರಮ ಗೋ ಸಾಗಣೆ ದಂಧೆ ನಡೆಯುತ್ತಲೇ ಇದ್ದು, ಅಂತವರಿಗೆ ಇಂದು ಬಜರಂಗದಳ ಕಾರ್ಯಕರ್ತರು ಶಾಕ್ ನೀಡಿದ್ದಾರೆ.
ತುಮಕೂರು ಜಿಲ್ಲೆ ತಿಪಟೂರಿನ ಗಾಂಧಿನಗರದಿಂದ ವಾಹನದಲ್ಲಿ ಅಕ್ರಮವಾಗಿ ಬೆಂಗಳೂರಿಗೆ ಗೋಮಾಂಸವನ್ನು ಸಾಗಾಟ ಮಾಡಲಾಗ್ತಿತ್ತು. ಗೋಮಾಂಸ ಸಾಗಾಟದ ಬಗ್ಗೆ ಬಜರಂಗದಳ ಕಾರ್ಯಕರ್ತರಿಗೆ ಖಚಿತ ಮಾಹಿತಿ ಬಂದಿತ್ತು. ಹೀಗಾಗಿ ಗೋಮಾಂಸ ಸಾಗಿಸುತ್ತಿದ್ದ ವಾಹನವನ್ನು ಚೇಸ್ ಮಾಡಿ ಕ್ಯಾತ್ಸಂದ್ರ ಟೋಲ್ ಬಳಿ ಅಡ್ಡಗಟ್ಟಿ ಹಿಡಿದಿದ್ದಾರೆ. ಬಳಿಕ ಕ್ಯಾತ್ಸಂದ್ರ ಪೊಲೀಸರಿಗೆ ಕರೆ ಮಾಡಿ ಮಾಹಿತಿಯನ್ನು ತಿಳಿಸಿದ್ದು, ಗೋಮಾಂಸ ತುಂಬಿದ ವಾಹನ ಹಾಗೂ ಡ್ರೈವರ್ ಮಸೂದ್ ಎಂಬಾತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಇನ್ನು ವಾಹನದಲ್ಲಿ ಕ್ವಿಂಟಾಲ್‌ಗಟ್ಟಲೇ ಗೋಮಾಂಸ ಪತ್ತೆಯಾಗಿದೆ. ಐದು ಹಸುಗಳ ದೇಹದ ಭಾಗ ಪತ್ತೆಯಾಗಿದರೆ, ನಾಲ್ಕು ಹಸುವಿನ ರುಂಡ ಪತ್ತೆಯಾಗಿದೆ. ತಿಪಟೂರಿನ ಗಾಂಧಿನಗರದಲ್ಲಿ ಗೋವುಗಳನ್ನು ವಧೆ ಮಾಡಿ ಬೆಂಗಳೂರಿಗೆ ಸಾಗಿಸುತ್ತಿರುವುದಾಗಿ ಚಾಲಕ ಮಸೂದ್ ಒಪ್ಪಿಕೊಂಡಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಿಕೊಂಡಿರುವ ಕ್ಯಾತ್ಸಂದ್ರ ಪೊಲೀಸರು. ಪಶು ವೈದ್ಯಾಧಿಕಾರಿಗಳಿಂದ ಮಹಜರು ನಡೆಸಿ ಎಫ್‌ಎಸ್‌ಐಎಲ್‌ಗೆ ಮಾಂಸದ ಸ್ಯಾಂಪಲ್ ಗಳನ್ನು ಕಳುಹಿಸಿಕೊಟ್ಟಿದ್ದಾರೆ. ಅಲ್ಲದೇ ಮೈದಾಳದ ಬಳಿ ಇರುವ ಬೈರಾಪುರದಲ್ಲಿ ಪೊಲೀಸರು ಹಾಗೂ ಬಜರಂಗದಳ ಕಾರ್ಯಕರ್ತರು ಸೀಜ್ ಮಾಡಲಾಗಿದ್ದ ಗೋಮಾಂಸವನ್ನು ಮಣ್ಣು ಮಾಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಜರುಗಿಸುವಂತೆ ಬಜರಂಗದಳ ಕಾರ್ಯಕರ್ತರು ಮನವಿ ಮಾಡಿದ್ದಾರೆ.