ತುಮಕೂರು: ಅವ್ಯಸ್ಥೆಯ ಆಗರವಾಯ್ತಾ ತುಮಕೂರು ಹೈಟೆಕ್ ಬಸ್ ನಿಲ್ದಾಣ..!

ಬಳಕೆಯಾಗದ ಎಸ್ಕಲೇಟರ್
ಬಳಕೆಯಾಗದ ಎಸ್ಕಲೇಟರ್
ತುಮಕೂರು

ತುಮಕೂರು:

ಸ್ಮಾರ್ಟ್‌ ಸಿಟಿ ತುಮಕೂರಿನಲ್ಲಿ ಹೈಟೆಕ್‌ ಬಸ್‌ ನಿಲ್ದಾಣ ಉದ್ಘಾಟನೆಯಾಗಿ ಕೇವಲ 6 ತಿಂಗಳಷ್ಟೇ ಕಳೆದಿದ್ದು, ಬರೀ ಆರು ತಿಂಗಳಿಗೆ ತನ್ನ ಹೊಳಪನ್ನು ಕಳೆದುಕೊಂಡಿದೆ. ನೋಡಲು ಮಾತ್ರ  ಅಂದ ಚೆಂದವಾಗಿದೆ, ಆದರೆ ಒಳಗೆ ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ ಸುಮಾರು 135 ಕೋಟಿ ವೆಚ್ಚದಲ್ಲಿ ಡಿ.ದೇವರಾಜ ಅರಸು ಕೆಎಸ್‌ಆರ್‌ಟಿಸಿ ಹೈಟೆಕ್‌ ಬಸ್‌ ನಿಲ್ದಾಣ ಮಾಡಲಾಗಿದ್ದು, ಕಾಮಗಾರಿ ಮುಗಿಯುವ ಮುನ್ನವೇ ಸಿಎಂ ಸಿದ್ದರಾಮಯ್ಯ ಅವರಿಂದ ಬಸ್‌ ನಿಲ್ದಾಣ  ಉದ್ಘಾಟನೆ ಮಾಡಲಾಗಿತ್ತು.

ಈ ಹೈಟೆಕ್‌ ಬಸ್‌ ನಿಲ್ದಾಣದ ಒಳಗೆ ಅವ್ಯವಸ್ಥೆ, ಅಸ್ವಚ್ಛತೆ ತಾಂಡವ ಆಡ್ತಾ ಇದ್ದು, ಅಧಿಕಾರಿಗಳು ಕಣ್ಣೀದ್ದು ಕುರುಡರಂತೆ ವರ್ತಿಸುತ್ತಿದ್ದಾರೆ. ಬಸ್‌ ನಿಲ್ದಾಣದಲ್ಲಿ ನಿರ್ಮಿಸಿರೋ ಶುದ್ಧ ನೀರಿನ ಘಟಕ ಕೆಟ್ಟು ನಿಂತಿದ್ದು ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ಬಸ್‌ ನಿಲ್ದಾಣದಲ್ಲಿ ಒಟ್ಟು ಮೂರು ಕಡೆ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಾಣ ಮಾಡಲಾಗಿದ್ದು, ನೆಲ ಮಹಡಿಯಲ್ಲಿಯೋ ಘಟಕ ಮಾತ್ರ ಸುಸ್ಥಿತಿಯಲ್ಲಿದೆ. ಆದರೆ ಉಳಿದಂತೆ ಎರಡು ಘಟಕಗಳಲ್ಲಿ ನೀರು ಬರ್ತಾ ಇಲ್ಲ. ಹೀಗಾಗಿ ಪ್ರಯಾಣಿಕರು ಅಂಗಡಿಗಳಲ್ಲಿ ದುಡ್ಡು ಕೊಟ್ಟು ನೀರನ್ನು ಖರೀದಿಸುವ ದುಸ್ಥಿತಿ ಎದುರಾಗಿದೆ.

ನಿಲ್ದಾಣದ ಒಳಗಡೆ ನಾಲ್ಕು ಕಡೆ ಎಸ್ಕಲೇಟರ್ ಅಳವಡಿಸಲಾಗಿದ್ದು, ಆದರೆ ಅದರಲ್ಲಿ ಪ್ರಸ್ತುತ ಎರಡು ಮಾತ್ರ ಚಾಲನೆಯಲ್ಲಿವೆ. ಅವು ಸಹ ಯಾವಾಗ ಚಾಲನೆಯಲ್ಲಿರುತ್ತವೆ, ಯಾವಾಗ ನಿಂತಿರುತ್ತವೆ ಎಂಬುದು ಯಾರಿಗೂ ಗೊತ್ತಿಲ್ಲ. ಬಸ್‌ಗಳ ಸಂಚಾರ ಶುರುವಾದ ಪ್ರಾರಂಭದಲ್ಲಿ ಜನರು ಎಸ್ಕಲೇಟರ್‌ನಲ್ಲಿ ಓಡಾಡಿ ಖುಷಿಪಟ್ಟಿದ್ದರು. ನಂತರದ ದಿನಗಳಲ್ಲಿ ಜನ ಬಳಸಲು ಸಾಧ್ಯವಾಗುತ್ತಿಲ್ಲ.

ಮತ್ತೊಂದೆಡೆ  6 ವರ್ಷಗಳ ಹಿಂದೆ 4.39 ಎಕರೆ ವಿಸ್ತೀರ್ಣದಲ್ಲಿ ಬಸ್‌ ನಿಲ್ದಾಣ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಪ್ರಾರಂಭದಲ್ಲಿ 2022ರ ವೇಳೆಗೆ ಮುಗಿಸುವ ಗುರಿ ನಿಗದಿಪಡಿಸಲಾಗಿತ್ತು. ಕೋವಿಡ್‌ ಕಾರಣದಿಂದ ವಿಳಂಬವಾದ ಕೆಲಸ ಇದುವರೆಗೆ ಪೂರ್ಣಗೊಂಡಿಲ್ಲ. ಕಳೆದ ಜುಲೈನಿಂದ ಬಸ್‌ಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ನೆಲ ಮಹಡಿ, ಕೆಳಗಿನ ನೆಲ ಮಹಡಿ, ಮೇಲಿನ ನೆಲ ಮಹಡಿಯನ್ನು ಮಾತ್ರ ಬಳಕೆಗೆ ನೀಡಲಾಗಿದೆ. ಪಾರ್ಕಿಂಗ್‌ ಸ್ಟಾರ್ಟ್‌ ನಲ್ಲಿ ಅಸ್ವಚ್ಛತೆ ತಾಂಡವ ಆಡ್ತಾ ಇದೆ.

ಜೊತೆಗೆ ನಿಲ್ದಾಣದಲ್ಲಿ ಪೊಲೀಸ್‌ ಚೌಕಿ ಅಳವಡಿಸಲಾಗಿದೆ ಆದರೆ ಅದರಲ್ಲಿ ಪೊಲೀಸರೇ ಇರುವುದಿಲ್ಲ. ಇದು ಕೇವಲ ಬೆದರು ಬೊಂಬೆಯಾಗಿದೆ. ರಾತ್ರಿ ಸಮಯದಲ್ಲಿ ಪ್ರಯಾಣಿಕರಿಗೆ ಅಗತ್ಯ ಮಾಹಿತಿ ನೀಡಬೇಕಾದ ಸಿಬ್ಬಂದಿ ಕೂಡ ಕಾಣಿಸುವುದಿಲ್ಲ. ತುಂಬಾ ಜನ ರಾತ್ರಿ ಇಡೀ ನಿಲ್ದಾಣದಲ್ಲೇ ಕಳೆಯುತ್ತಾರೆ. ಅವರಿಗೆ ಸೂಕ್ತ ಭದ್ರತೆ ಇಲ್ಲವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಅಗತ್ಯ ಸೌಲಭ್ಯ ಒದಗಿಸಬೇಕಿದೆ.

 

 

Author:

...
Editor

ManyaSoft Admin

Ads in Post
share
No Reviews