ತುಮಕೂರು:
ತುಮಕೂರು ಜಿಲ್ಲೆಯಲ್ಲಿ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ ಪ್ರಕರಣಗಳು ಆಗಾಗ್ಗೆ ಬೆಳಕಿಗೆ ಬರ್ತಾನೆ ಇವೆ. ಇಷ್ಟೆಲ್ಲಾ ಆಗ್ತಿದ್ರೂ ಬೆಸ್ಕಾಂ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಳ್ತಿಲ್ಲ. ಇದೀಗ ತುಮಕೂರು ನಗರದ ಒಂಬತ್ತನೇ ವಾರ್ಡ್ ನಲ್ಲಿರೋ ಜೈಪುರದಲ್ಲಿ ಟ್ರಾನ್ಸ್ ಫಾರ್ಮರ್ಗಳು ಬಲಿಗಾಗಿ ಕಾದುಕುಳಿತಿದೆ.
ಕಳೆದ ವರ್ಷವಷ್ಟೇ ತುಮಕೂರಿನ ಹೊರವಲಯದ ಬೆಳಗುಂಬ ಗ್ರಾಮದಲ್ಲಿ ಇಬ್ಬರು ವಿದ್ಯಾರ್ಥಿಗಳು ಮನೆ ಮುಂದೆ ಆಡುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶಿಸಿ ಸಾವನಪ್ಪಿದ್ದರು. ಇದೆಲ್ಲಾ ಆದ ಬಳಿಕವೂ ಬೆಸ್ಕಾಂ ಅಧಿಕಾರಿಗಳು ಬುದ್ಧಿ ಕಲಿತಿಲ್ಲ. ಜೈಪುರದಲ್ಲಿ ಟ್ರಾನ್ಸ್‌ಫಾರ್ಮರ್ ದುಸ್ಥಿತಿ ಹೇಳತೀರದ್ದಾಗಿದೆ. ಟ್ರಾನ್ಸ್‌ಫಾರ್ಮರ್ ತಂತಿಗಳು ಮುರಿದು ಜೊತುಬಿದ್ದಿದ್ದು, ಕೇಬಲ್ ಗಳೆಲ್ಲಾ ಸುಟ್ಟು ಹೋಗಿವೆ. ಇದರಿಂದ ಮುಂದಿನ ದಿನಗಳಲ್ಲಿ ಅಪಾಯ ತಪ್ಪಿದಲ್ಲ.
ಜೊತೆಗೆ ಜೈಪುರದ ಬೀದಿಗಳಲ್ಲಿರುವ ಲೈನ್ ಗಳ ಮೇಲೆ ಮರಗಳ ಕೊಂಬೆಗಳು ಬಿದ್ದಿದ್ದು ಸಾರ್ವಜನಿಕರು ಯಾವ ಸಮಯದಲ್ಲಿ ಏನಾಗುತ್ತೋ ಅನ್ನೋ ಆತಂಕದಲ್ಲಿದ್ದಾರೆ. ಈ ಸ್ಥಳದಲ್ಲಿ ಸಾರ್ವಜನಿಕರು ದಿನನಿತ್ಯ ಒಡಾಡುತ್ತಿದ್ದಾರೆ. ಸುಟ್ಟು ಹೋದ ತಂತಿಗಳು ಕೈ ಎಟುಕುವಂತಿದ್ದು ಅಪಾಯದ ಮುನ್ಸೂಚನೆ ನೀಡುತ್ತಿದೆ.ನಗರದಲ್ಲೇ ಹೀಗಾದ್ರೆ ಇನ್ನು ಹಳ್ಳಿಗಳ ಸ್ಥಿತಿ ಹೇಗಿರಬಹುದು ಅನ್ನೋದು ಸಾರ್ವಜನಿಕರ ಪ್ರಶ್ನೆಯಾಗಿದೆ. ಇನ್ನಾದರೂ ಇದರ ಬಗ್ಗೆ ಬೆಸ್ಕಾಂ ಅಧಿಕಾರಿಗಳು ಎಚ್ಚೆತ್ತುಕೊಂಡು ಮುಂದೆಯಾಗುವ ಅಪಾಯವನ್ನು ತಪ್ಪಿಸಬೇಕಾಗಿದೆ.