ಶಿರಾ:
ಶಿರಾ ನಗರ ತುಮಕೂರಿನಿಂದ 50 ಕಿಲೋ ಮೀಟರ್ ದೂರದಲ್ಲಿದ್ದರೂ ಕೂಡ ಸ್ವಚ್ಛತೆ ಅನ್ನೋದು ಮರೀಚಿಕೆ ಆಗಿದೆ. ಸಾಲು ಸಾಲು ಸಮಸ್ಯೆಗಳಿದ್ದರು ಅಧಿಕಾರಿಗಳು ಮಾತ್ರ ನಿದ್ದೆಯಿಂದ ಎದ್ದಿಲ್ಲ. ಶಿರಾ ನಗರದ ಜನತೆಗೆ ಕೊಳಚೆ ನೀರಿನ ಸಮಸ್ಯೆ ಹೆಚ್ಚಾಗಿದ್ದು, ನಿವಾಸಿಗಳು ಹೈರಾಣಾಗಿದ್ದಾರೆ. ಹೌದು ಶಿರಾದ ಲಕ್ಷ್ಮೀ ನಗರದ ವಾರ್ಡ್ ಪಕ್ಕದಲ್ಲಿರೋ KSRTC ಬಸ್ ನಿಲ್ದಾಣದ ಆವರಣದ ಪಕ್ಕದಲ್ಲಿ ಚರಂಡಿ ಕಟ್ಟಿಕೊಂಡಿದ್ದು, ಚರಂಡಿ ನೀರು ರಸ್ತೆಗೆ ಬಂದಿದೆ. ಇದರಿಂದ ದುರ್ನಾತ ಬೀರುತ್ತಿದ್ದು, ಸೊಳ್ಳೆಗಳ ಉತ್ಪತ್ತಿಯಿಂದ ಸ್ಥಳೀಯರು ಪರದಾಡುವಂತಾಗಿದೆ.
ನಗರದಲ್ಲಿ ನೂತನವಾಗಿ ಸಿಸಿ ಚರಂಡಿ ನಿರ್ಮಾಣ ಮಾಡಿದ್ದರೂ ಸಹ ಅಧಿಕಾರಿಗಳು ಸರಿಯಾದ ನಿರ್ವಹಣೆ ಮಾಡದಿರೋದರಿಂದ ಚರಂಡಿ ಕಟ್ಟಿಕೊಂಡಿದೆ. ಚರಂಡಿ ನೀರು ರಸ್ತೆಗೆ ಬರ್ತಾ ಇದ್ದು ತರಕಾರಿ ಮಾರುಕಟ್ಟೆ ಸೇರಿ ಸುತ್ತಮುತ್ತಲಿನ ನಿವಾಸಿಗಳಲ್ಲಿರೋ ವೃದ್ಧರು, ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಚರಂಡಿ ಇದ್ದು ಇಲ್ಲದಂತಹ ಸ್ಥಿತಿ ತಲೆದೋರಿದೆ ಎಂದು ವ್ಯಾಪಾರಸ್ಥರು ಆಕ್ರೋಶ ಹೊರಹಾಕ್ತಿದ್ದಾರೆ.
ಇನ್ನು ಶಿರಾದ ಲಕ್ಷ್ಮೀ ನಗರದಲ್ಲಿ ಚರಂಡಿ ಸಮಸ್ಯೆ ಜೊತೆಗೆ ಕಸದ ಸಮಸ್ಯೆ ಕೂಡ ತಾಂಡವ ಆಡ್ತಾ ಇದ್ದು, ನಗರಸಭೆ ಬೇಜವಾಬ್ದಾರಿ ಯಿಂದಾಗಿ ಜನರು ಸಂಕಷ್ಟ ಪಡುವಂತಾಗಿದೆ. ಚರಂಡಿಗಳಿಗೆ ಔಷಧಿಗಳನ್ನು ಸಿಂಪಡಿಸುವುದಾಗಲಿ, ಚರಂಡಿಯಲ್ಲಿದ್ದ ಕಸವನ್ನು ಎತ್ತುವುದಾಗಲಿ ನಗರಸಭೆ ಸಿಬ್ಬಂದಿ ಮಾಡ್ತಾ ಇಲ್ಲ. ಇದರಿಂದ ನಿವಾಸಿಗಳು ಪರದಾಡುವಂತಾಗಿದೆ.
ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ನಗರದ ಸ್ವಚ್ಛತೆ ಬಗ್ಗೆ ಗಮನ ಹರಿಸ್ತಾರಾ ಎಂದು ಕಾದುನೋಡಬೇಕಿದೆ.