ತಿಪಟೂರು:
ಬಗರ್ ಹುಕುಂ ಸಾಗುವಳಿ ಭೂಮಿಗೆ ಬೆಂಕಿ ಬಿದ್ದು ಸುಮಾರು 20ಕ್ಕೂ ಹೆಚ್ಚು ಬಡ ರೈತರು ಬೆಳೆದಿದ್ದ ಬೆಳೆ, ತೆಂಗಿನ ಗಿಡಗಳು ಬೆಂಕಿಗೆ ಆಹುತಿಯಾಗಿರುವ ಪ್ರಕರಣ ದೊಡ್ಡಿಕಟ್ಟೆ ಗ್ರಾಮದಲ್ಲಿ ನಡೆದಿದೆ. ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ದೊಡ್ಡಿಕಟ್ಟೆ ಗ್ರಾಮದ ಸರ್ವೇ ನಂ. 7 ರಲ್ಲಿ ಈ ಅವಘಡ ಸಂಭವಿಸಿದೆ.
ಹತ್ತಿರದಲ್ಲೇ ಇರುವ ಅರಣ್ಯ ಪ್ರದೇಶದಲ್ಲಿ ಬಿದಿರಿಗಾಗಿ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಅದರ ಪಕ್ಕದಲ್ಲೇ ಸರ್ಕಾರಿ ಭೂಮಿ ಸಾಗುವಳಿ ಮಾಡಿಕೊಂಡ ಹತ್ತಾರು ರೈತರ ಜಮೀನಿಗೂ ವಿಸ್ತರಿಸಿ ಬೆಳೆಗಳು ಸುಟ್ಟು ಕರಕಲಾಗಿದೆ. ಸುಮಾರು 25-30 ವರ್ಷದಿಂದ ಸರ್ಕಾರಿ ಭೂಮಿ ಸಾಗುವಳಿ ಮಾಡಿಕೊಂಡಿರುವ ರೈತರಲ್ಲಿ ಬಹುತೇಕರು ದಲಿತರಾಗಿದ್ದಾರೆ. ಕಂದಾಯ ಇಲಾಖೆ ಸರ್ವೇ ಮಾಡಿ, ಸ್ಕೆಚ್ ಮಾಡಿರುತ್ತದೆ. ಈ ಭಾಗದ ಬಡರೈತರು ಖಾತೆಗಾಗಿ ಫಾರಂ 57 ರಲ್ಲಿ ಅರ್ಜಿ ಸಲ್ಲಿಸಿ, ಮಂಜೂರಾತಿಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲೇ ಬಂದಿದ್ದರು.
ಕೆಲವರು ಕಳೆದ ಐದಾರು ವರ್ಷದಿಂದ ತೆಂಗಿನ ಗಿಡಗಳನ್ನು ನೆಟ್ಟು, ಟ್ಯಾಂಕರ್ ಮೂಲಕ ನೀರು ಹಾಯಿಸಿ, ಗೊಬ್ಬರ ಹಾಕಿ ಪೋಷಿಸುತ್ತಿದ್ದರು. ಈಗ ದಿಕ್ಕು ತೋಚದಂತಾಗಿದ್ದಾರೆ. ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡು ನೊಂದ ರೈತರಿಗೆ ಸಹಾಯ ಹಸ್ತ ಚಾಚುವಂತೆ ಮನವಿ ಮಾಡಿದ್ದಾರೆ.