SPORTS: ವಿಶ್ವವಿಖ್ಯಾತ ತಿರುಪತಿ ವೆಂಕಟೇಶ್ವರ ಸ್ವಾಮಿಗೆ ಲಕ್ಷಾಂತರ ಭಕ್ತರೊಳಗಿನ ಒಬ್ಬರಾಗಿರುವ ಐಪಿಎಲ್ ಲಕ್ನೋ ಸೂಪರ್ ಜೈಂಟ್ಸ್ನ ಮಾಲೀಕ ಹಾಗೂ ಆರ್ಪಿ-ಸಂಜೀವ್ ಗೋಯೆಂಕಾ ಗ್ರೂಪ್ನ ಅಧ್ಯಕ್ಷರಾದ ಶ್ರೀ ಸಂಜೀವ್ ಗೋಯೆಂಕಾ ಅವರು, ಭಕ್ತಿ ಮತ್ತು ತುಂಬು ಹೃದಯದಿಂದ 3.36 ಕೋಟಿ ರೂಪಾಯಿ ಮೌಲ್ಯದ ಚಿನ್ನ ಹಾಗೂ ವಜ್ರ ಖಚಿತ ಆಭರಣಗಳನ್ನು ದಾನ ಮಾಡಿದ್ದಾರೆ.
ಶ್ರೀ ಸಂಜೀವ್ ಗೋಯೆಂಕಾ ತಿರುಪತಿ ದೇವಾಲಯಕ್ಕೆ 3 ಕೋಟಿ 36 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಹಾಗೂ ವಜ್ರ ಖಚಿತ ಆಭರಣಗಳನ್ನು ದಾನ ಮಾಡಿದ್ದಾರೆ. ಈ ಅಮೂಲ್ಯ ಕಾಣಿಕೆಯಲ್ಲಿ ಒಟ್ಟು 5.267 ಕೆ.ಜಿ ಬಂಗಾರದ ಆಭರಣಗಳಿವೆ. ಅವುಗಳಲ್ಲಿ ಕೆಲವು ವಜ್ರಗಳ ಹರಳುಗಳಿಂದ ಅಲಂಕೃತವಾಗಿವೆ.
ಸಂಜೀವ್ ಗೋಯೆಂಕಾ ಅವರು ತಮ್ಮ ಕುಟುಂಬದೊಂದಿಗೆ ತಿರುಪತಿಗೆ ಆಗಮಿಸಿ ಶ್ರೀ ವೆಂಕಟೇಶ್ವರಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು. ದಾನ ಮಾಡಲಾದ ಆಭರಣಗಳನ್ನು ಅವರು ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಯ್ಯ ಚೌಧರಿಗೆ ಹಸ್ತಾಂತರಿಸಿದರು. ಈ ಸಮಾರಂಭ ದೇವಾಲಯದ ರಂಗನಾಯಕಕುಲ ಮಂಟಪದಲ್ಲಿ ನಡೆಯಿತು.
ಇಂತಹ ಮಹತ್ತ್ವದ ದಾನವು ತಿರುಪತಿ ದೇವಾಲಯದ ಐತಿಹಾಸಿಕ ಪರಂಪರೆಗೆ ಮತ್ತೊಂದು ದಿವ್ಯ ಅಧ್ಯಾಯವನ್ನು ಸೇರಿಸಿದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ಭೇಟಿ ನೀಡುವ ಈ ಪವಿತ್ರ ಕ್ಷೇತ್ರಕ್ಕೆ, ಈ ರೀತಿಯ ಕಾಣಿಕೆಗಳು ದೇವರ ಭಕ್ತಿಗೆ ಜೀವಂತ ಸಾಕ್ಷಿಯಾಗುತ್ತವೆ.