ಮಧುಗಿರಿ:
ಚಳಿಗಾಲ ಮುಗಿದು ಬೇಸಿಗೆಗಾಲ ಆರಂಭವಾಗುತ್ತಿದ್ದಂತೆ ತುಮಕೂರು ಜಿಲ್ಲೆಯಲ್ಲಿ ಬಿಸಿಲಿನ ಬೇಗೆ ಹೆಚ್ಚಾಗ್ತಿದೆ. ಅದರಲ್ಲಿಯೂ ಬರಪೀಡಿತ ತಾಲೂಕುಗಳಾದ ಮಧುಗಿರಿ, ಪಾವಗಡ, ಶಿರಾ ಮತ್ತು ಕೊರಟಗೆರೆ ತಾಲೂಕುಗಳಲ್ಲಂತೂ ಬಿಸಿಲಿನ ಧಗೆ ಸಿಕ್ಕಾಪಟ್ಟೆ ಹೆಚ್ಚಾಗ್ತಿದೆ. ಒಂದು ಕಡೆ ಬಿಸಿಲಿನ ಧಗೆಗೆ ಜನರು ತತ್ತರಿಸಿ ಹೋಗ್ತಿದ್ರೆ ಮತ್ತೊಂದು ಕಡೆ ಈ ಬರಪೀಡಿತ ಪ್ರದೇಶದಲ್ಲಿ ಬೆಳೆದಿದ್ದ ಕನಕಾಂಬರ ಹೂಗಳು ಬಾಡುತಿದ್ದು, ಕಷ್ಟಪಟ್ಟು ಹೂವಿನ ಬೆಳೆ ಬೆಳೆದಿದ್ದ ರೈತರು ಕಂಗಾಲಾಗಿ ಹೋಗಿದ್ದಾರೆ.
ಮಧುಗಿರಿ ತಾಲೂಕಿನಲ್ಲಿ ಕಷ್ಟಪಟ್ಟು ಬೆಳೆದಿದ್ದ ಕನಕಾಂಬರ ಹೂ 1ಕೆಜಿಗೆ 150 ರಿಂದ 200 ರೂಗೆ ಮಾರಾಟವಾಗುತ್ತಿದ್ದು, ಕನಿಷ್ಟ ರೈತರು ಹಾಕಿದ ಬಂಡವಾಳವು ಕೈಗೆಟುಕದೇ ಇರೋದ್ರಿಂದ ರೈತರು ತಲೆಮೇಲೆ ಕೈ ಹೊತ್ತು ಕೂರುವಂತಾಗಿದೆ. ಮಧುಗಿರಿ ತಾಲೂಕು ಬರಪೀಡಿತ ತಾಲೂಕುಗಳಲ್ಲಿ ಒಂದು. ಮಳೆಯಾಶ್ರಿತ ಪ್ರದೇಶ. ಇಲ್ಲಿ ಯಾವುದೇ ಕೈಗಾರಿಕೆ, ಕಾರ್ಖಾನೆಗಳಿಲ್ಲದೆ ಇರೋದ್ರಿಂದ ಇದ್ದ ಜಮೀನಿನಲ್ಲೇ ಅಲ್ಪಸ್ವಲ್ಪ ಬೆಳೆ ಬೆಳೆದು ತೃಪ್ತಿ ಪಡುವ ಸ್ಥಿತಿ ಇಲ್ಲಿನ ಜನರದ್ದು. ಇಂತಹ ಸ್ಥಿತಿಯಲ್ಲಿ ಕಷ್ಟುಪಟ್ಟು ಬೆಳೆದ ರೈತರಿಗೆ ಬಿಸಿಲಿನ ತಾಪಮಾನ ಕಂಟಕವಾಗಿ ಪರಿಣಮಿಸಿದ್ದು, ಬಿಸಿಲಿನ ತಾಪ ಏರಿದಂತೆಲ್ಲಾ ಹೂವಿನ ಬೆಲೆ ನೆಲಕಚ್ಚುತಿದ್ದು ಹೂ ಬೆಳೆದ ರೈತರು ಸಂಕಷ್ಟಕ್ಕೀಡಾಗಿದ್ದಾರೆ.
ಕಲ್ಪತರು ನಾಡಿನಲ್ಲಿ ಬಿಸಿಲಿನ ತಾಪಮಾನ ಹೆಚ್ಚಿದೆ. 30 ಡಿಗ್ರಿ ಸೆಲ್ಸಿಯಸ್ ಇರಬೇಕಿದ್ದ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ದಾಟಿದೆ. ಹೀಗಾಗಿ ಹೂವಿನ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ವರ್ಷ ಕಷ್ಟಪಟ್ಟು ಕೊಳವೆಬಾವಿ ನೀರಿನ ಮೂಲಕ ಬೆಳೆ ಉಳಿಸಿಕೊಂಡರೂ ಸಹ ಸೂರ್ಯನ ಕೋಪಕ್ಕೆ ಹೂವಿನ ಬೆಳೆ ಬಾಡುವ ಸ್ಥಿತಿ ನಿರ್ಮಾಣ ಆಗಿದೆ. ಹೀಗಾಗಿ ಹಳೇ ಸೀರೆಗಳನ್ನು ಸಂಗ್ರಹಿಸಿ ಹೂ ಬೆಳೆಗೆ ಹೊದಿಕೆ ಮಾಡಿಕೊಂಡು ಅವುಗಳನ್ನ ಸಂರಕ್ಷಣೆ ಮಾಡಲು ರೈತರು ಹರಸಾಹಸ ಪಡುತ್ತಿದ್ದಾರೆ.
ಈ ವರ್ಷ ಮಳೆ ಇಲ್ಲದಿದ್ದರೂ ಸಹ ಕೆಲ ರೈತರು ಕಷ್ಟಪಟ್ಟು ಹೂವಿನ ಬೆಳೆ ತೆಗೆದಿದ್ದಾರೆ. ಆದ್ರೆ, ಹೆಚ್ಚಿದ ಬಿಸಿಲಿನ ತಾಪಮಾನದ ಪರಿಣಾಮ ಹೂ ಬೆಳೆ ಹಾಳಾಗುತ್ತಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ನಿರ್ಮಾಣ ಆಗಿದೆ.ಹೀಗಾಗಿ ಸರಕಾರ ಈ ಬಗ್ಗೆ ಗಮನಹರಿಸಿ ಸೂಕ್ತ ಪರಿಹಾರ ನೀಡಬೇಕೆಂದು ರೈತರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.