ಗುಬ್ಬಿ:
ನಿಮಗೆ ಏನೇ ಕಷ್ಟ ಇರಲಿ..ಅದು ಆರ್ಥಿಕ ಸಂಕಷ್ಟವೇ ಇರಲಿ..ಅಥವಾ ಜನ, ಜಾನುವಾರಿನ ಆರೋಗ್ಯದ ಸಮಸ್ಯೆಯೇ ಇರಲಿ..ಈ ಬಸವಣ್ಣನಿಗೆ ಒಂದು ಘಂಟೆ ಕಟ್ಟಿ ಹರಕೆ ಕಟ್ಟಿಕೊಂಡ್ರೆ ಸಾಕು ನಿಮ್ಮೆಲ್ಲಾ ಕಷ್ಟಗಳು ಪರಿಹಾರ ಆಗುತ್ತೆ. ಇನ್ನು ದೂರದ ಪ್ರಯಾಣ ಮಾಡ್ತಿರೋರು ಇಲ್ಲಿ ವಾಹನ ನಿಲ್ಲಿಸಿ, ಕೈಮುಗಿದು ಕರ್ಪೂರ ಹಚ್ಚಿ ಹೊರಟ್ರೆ ಯಾವುದೇ ತೊಂದರೆಯಾಗೋದಿಲ್ಲ.
ತುಮಕೂರಿನಿಂದ ಗುಬ್ಬಿಗೆ ಸಾಗುವಾಗ ಹೆದ್ದಾರಿಯ ಪಕ್ಕದಲ್ಲೇ ಸಿಗುತ್ತೆ ಈ ಗಂಟೆ ಬಸವಣ್ಣನ ದೇವಸ್ಥಾನ. ಗುಬ್ಬಿಯಿಂದ ಕೂಗಳತೆ ದೂರದಲ್ಲಿರೋ ಮುದಿಗೆರೆ ಗ್ರಾಮದಲ್ಲಿ ನೆಲೆಸಿರೋ ಈ ಗಂಟೆ ಬಸವಣ್ಣ ಉದ್ಭವ ಮೂರ್ತಿ. ಬಸವಣ್ಣನ ಈ ಉದ್ಭವ ಮೂರ್ತಿ ದಿನಕಳೆದಂತೆ ಬೆಳೆಯುತ್ತಾ ಹೋಗ್ತಿದೆಯಂತೆ.
ಇನ್ನು ಇಲ್ಲಿ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಬಸವಣ್ಣನಲ್ಲಿ ಬೇಡಿಕೊಳ್ತಾರೆ. ಇಷ್ಟಾರ್ಥಗಳನ್ನ ಈಡೇರಿಸಿದ್ರೆ, ಸಂಕಷ್ಟದಿಂದ ಪಾರುಮಾಡಿದ್ರೆ ಘಂಟೆಯನ್ನ ತಂದು ಕಟ್ಟುವುದಾಗಿ ಹರಕೆ ಮಾಡಿಕೊಳ್ತಾರೆ. ಅದರಂತೆಯೇ ಹರಕೆ ತೀರಿದ ಬಳಿಕ ಬಂದು ಸ್ವಾಮಿಗೆ ಕೈಮುಗಿದು ಘಂಟೆ ಕಟ್ಟಿ ಹೋಗ್ತಾರೆ. ಇನ್ನು ಈ ರಸ್ತೆಯಲ್ಲಿ ಸಂಚರಿಸುವ ಪ್ರತಿಯೊಬ್ಬರೂ ಒಂದು ಕ್ಷಣ ಇಲ್ಲಿ ನಿಂತು ದೇವರಿಗೆ ಕೈಮುಗಿಯದೇ ಮುಂದೆ ಹೋಗಲ್ಲ. ಇದೀಗ ಈ ಗಂಟೆ ಬಸವಣ್ಣನ ಭಕ್ತನೊಬ್ಬ ಬಸವನನ್ನೇ ತಂದು ಹರಕೆಯಾಗಿ ನೀಡಿದ್ದಾರೆ.
ಇನ್ನು ಸ್ಥಳೀಯರಿಗೆ ಗಂಟೆ ಬಸವಣ್ಣನಾಗಿ, ಪ್ರಯಾಣಿಕರಿಗೆ ರಸ್ತೆ ಬಸವಣ್ಣನಾಗಿ, ಜನ ಜಾನುವಾರುಗಳಿಗೆ ಉಣ್ಣೆ ಬಸವಣ್ಣನಾಗಿ ಅನಾದಿ ಕಾಲದಿಂದಲೂ ಈ ಬಸವೇಶ್ವರಸ್ವಾಮಿ ಭಕ್ತರ ಕಷ್ಟಕಾರ್ಪಣ್ಯಗಳನ್ನ ಕಳೆಯುತ್ತಿದ್ದಾನೆ. ಜಾನುವಾರುಗಳಿಗೆ ಉಣ್ಣೆಯಾದಂತಹ ಸಂದರ್ಭದಲ್ಲಿಯೂ ರೈತರು ಇಲ್ಲಿಗೆ ಬಂದು ಘಂಟೆಯ ಹರಕೆಯನ್ನ ಕಟ್ಟಿಕೊಂಡರೆ ಉಣ್ಣೆಗಳು ಬಿದ್ದುಹೋಗುತ್ತವೆ ಅನ್ನೋ ನಂಬಿಕೆ ಕೂಡ ಇದ್ಯಂತೆ.
ಈ ಗಂಟೆ ಬಸವಣ್ಣನ ಇನ್ನೊಂದು ವಿಶೇಷ ಅಂದರೆ, ಈ ರಸ್ತೆಯಲ್ಲಿ ಪ್ರತಿನಿತ್ಯ ಸಂಚರಿಸುವ ಜನರಿಗೆ ಯಾವುದೇ ಅಪಾಯವಾಗದಂತೆ ಗಂಟೆ ಬಸವಣ್ಣ ಕಾಪಾಡುತ್ತಿದ್ದಾನಂತೆ. ಈ ರಸ್ತೆಯ ಮೂಲಕ ಸಾಗುವ ವಾಹನ ಸವಾರರು ಒಂದು ಸಾರಿ ಇಲ್ಲಿ ತಮ್ಮ ವಾಹನವನ್ನ ನಿಲ್ಲಿಸಿ ಈ ಗಂಟೆ ಬಸವಣ್ಣನಿಗೆ ಕೈಮುಗಿದೇ ಮುಂದೆ ಹೋಗ್ತಾರೆ. ಇದರಿದ ತಮ್ಮ ಪ್ರಯಾಣ ಸುಖಕರವಾಗಿರುತ್ತೆ ಅನ್ನೋ ನಂಬಿಕೆ ಅವರದ್ದು. ಇನ್ನು ಇವತ್ತು ಈ ಗಂಟೆ ಬಸವಣ್ಣನ ದೇವಸ್ಥಾನದಲ್ಲಿ ನವಗ್ರಹ ಪೂಜೆ, ಪುಣ್ಯಾಹ, ಅಭಿಷೇಕವನ್ನ ಮಾಡಿ ವಿಶೇಷ ಪೂಜೆಯನ್ನ ಮಾಡಲಾಯಿತು.
ಒಟ್ಟಿನಲ್ಲಿ ಗುಬ್ಬಿಯ ಈ ಗಂಟೆ ಬಸವಣ್ಣನ ಪವಾಡ ಎಲ್ಲರ ಗಮನ ಸೆಳೆಯುತ್ತಿದ್ದು, ನೀವು ಕೂಡ ಈ ದಾರಿಯಲ್ಲಿ ಹೋಗುವಾಗ ಗಂಟೆ ಬಸವಣ್ಣನ ದರ್ಶನ ಪಡೆದು ಪುನೀತರಾಗಿ.