ಶಿರಾ : ಶಿರಾದ ಕಗ್ಗಲಡುವಿನಲ್ಲಿ ಬಣ್ಣದ ಕೊಕ್ಕರೆಗಳ ಕಲರವ

ವಿದೇಶಿ ಪಕ್ಷಿಗಳು
ವಿದೇಶಿ ಪಕ್ಷಿಗಳು
ತುಮಕೂರು

ಶಿರಾ :

ಶಿರಾ ನಗರದ ಕಗ್ಗಲಡು ಗ್ರಾಮದಲ್ಲಿ ಇದೀಗ ವಿದೇಶಿ ಹಕ್ಕಿಗಳ ಕಲರವ. ಬಣ್ಣಬಣ್ಣದ ಕೊಕ್ಕರೆಗಳು ಇಲ್ಲಿಗೆ ವಲಸೆ ಬರ್ತಾ ಇದ್ದು, ನೋಡುಗರ ಕಣ್ಮನ ಸೆಳೆಯುತ್ತಿವೆ.

ಪ್ರತಿ ವರ್ಷದಂತೇ ಈ ವರ್ಷವೂ ಕಗ್ಗಲಡು ಗ್ರಾಮಕ್ಕೆ ವಿದೇಶಿ ಪಕ್ಷಿಗಳು ವಲಸೆ ಬರ್ತಿವೆ. ಸಂತಾನೋತ್ಪತ್ತಿಗೆಂದು ಪಾಕಿಸ್ತಾನ, ಬರ್ಮಾ, ಶ್ರೀಲಂಕಾ, ಮಲೇಶಿಯಾ, ನ್ಯೂಜಿಲೆಂಡ್‌ ಹಾಗೂ ಬಾಂಗ್ಲಾದೇಶ ಸೇರಿದಂತೆ ಬೇರೆ ಬೇರೆ ದೇಶಗಳ ಹಕ್ಕಿಗಳು ವಲಸೆ ಬರ್ತಿವೆ. ಕಗ್ಗಲಡು ಗ್ರಾಮದ ಹುಣಸೇಮರಗಳಲ್ಲಿ ಗೂಡು ಕಟ್ಟಿ ತಾಲೂಕಿನ ಸುತ್ತಮುತ್ತಲಿನ ಕೆರೆಗಳಿಂದ ಆಹಾರ ಹುಡುಕಿ ತಂದು ಮರಿಗಳನ್ನು ಪೋಷಿಸುತ್ತವೆ.

ಸಾಮಾನ್ಯವಾಗಿ ಡಿಸೆಂಬರ್ ಅಂತ್ಯ ಮತ್ತು ಜನವರಿ ಮೊದಲ ವಾರದಲ್ಲಿ ಬರುವ ಪಕ್ಷಿಗಳು ಮೊಟ್ಟೆ ಇಟ್ಟು ಅದು ಮರಿಯಾಗಿ ಹೊರ ಬಂದು, ಅವುಗಳು ಹಾರುವುದನ್ನು ಕಲಿಯುವವರೆಗೂ ಇಲ್ಲಿದ್ದು ಬಳಿಕ ಮತ್ತೆ ತಮ್ಮ ದೇಶಗಳಿಗೆ ವಾಪಾಸ್‌ ಹೋಗುತ್ತಿವೆ. ವೈಯಿಂಟೆಡ್ ಸ್ಪಾರ್ಕ್, ಬ್ರಾಹಿನಿ ಡಕ್ ಮುಂತಾದ ಹೆಸರುಗಳಿಂದ ಕರೆಸಿಕೊಳ್ಳುವ ಈ ಪಕ್ಷಿಗಳು ಈಗಾಗಲೇ ಮೊಟ್ಟೆ ಇಟ್ಟು ಮರಿ ಮಾಡಿವೆ. 1999ರಲ್ಲಿ ಕಾಣಿಸಿಕೊಂಡ ವಲಸೆ ಹಕ್ಕಿಗಳಿಂದ ಆರಂಭದಲ್ಲಿ ಗ್ರಾಮದಲ್ಲಿ ಆತಂಕ ಮೂಡಿತ್ತು. ನಂತರದ ದಿನಗಳಲ್ಲಿ ಹಲವಾರು ತಜ್ಞರು ಅಭಿಪ್ರಾಯ ಸಂಗ್ರಹ ಹಾಗೂ ಸ್ಥಳೀಯ ಅರಣ್ಯ ಇಲಾಖೆಯ ಸಹಕಾರದಿಂದ ಗ್ರಾಮಸ್ಥರಿಗೆ ಮನವರಿಕೆಯಾದ ನಂತರ ವಿದೇಶಿ ಹಕ್ಕಿಗಳು ಬಿಡಾರ ಹೂಡಿರುವುದು ಪರಿಸರ ಮತ್ತು ಪಕ್ಷಿ ಪ್ರಿಯರ ಸಂಭ್ರಮಕ್ಕೆ ಕಾರಣವಾಯಿತು. ಅಂದಿನಿಂದ ಈವರೆಗೆ ದಿನದಿಂದ ದಿನಕ್ಕೆ ಇದು ಪಕ್ಷಿಧಾಮವಾಗಿ ಬದಲಾಗಿದೆ.

ಗ್ರಾಮದ ಮರಗಳ ಅಂಗಳದಲ್ಲಿ ಹಿಂಡು ಹಿಂಡಾಗಿ ಜಮಾಯಿಸುತ್ತಿರುವ ಪಕ್ಷಿ ಪ್ರಿಯರು ಹಕ್ಕಿಗಳ ಮನಮೋಹಕ ಸೊಬಗನ್ನು ಸವಿಯುತ್ತಿದ್ದಾರೆ. ಭಿನ್ನ-ವಿಭಿನ್ನ ಪಕ್ಷಿಗಳು ಹಿಂಡುಹಿಂಡಾಗಿ ಲಗ್ಗೆ ಇಟ್ಟಿವೆ. ಈ ಕಲರ್‌ಫುಲ್‌ ಪಕ್ಷಿಗಳ ಕಲರವ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿದೆ.

Author:

...
Editor

ManyaSoft Admin

share
No Reviews