ಮೈಸೂರು : ಮೈಸೂರಿನ ರಾಜಕುಟುಂಬದ ಸದಸ್ಯ ಮತ್ತು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, ಮೈಸೂರು ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (KSDL) ಸಂಸ್ಥೆಗೆ ನಟಿ ತಮನ್ನಾ ಭಾಟಿಯಾ ಅವರನ್ನು ರಾಯಭಾರಿಯಾಗಿ ನೇಮಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ತೀವ್ರವಾಗಿ ವಿರೋಧಿಸಿದ್ದಾರೆ.
1916ರಲ್ಲಿ ನಮ್ಮ ಮೈಸೂರು ಸಂಸ್ಥಾನದ ಅರಸರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರವೃತ್ತಿಯಿಂದ ಸ್ಥಾಪಿತವಾಗಿದ್ದು, ಮೈಸೂರು ಸ್ಯಾಂಡಲ್ ಸೋಪ್ನಂತಹ ಗಣನೀಯ ಉತ್ಪನ್ನಗಳನ್ನು ನೀಡುತ್ತಿದೆ. ಇದರಲ್ಲಿ ಕನ್ನಡಿಗರ ಅಪಾರ ಅಭಿಮಾನವಿದೆ ಎಂದು ಯದುವೀರ ಒಡೆಯರ್ ಹೇಳಿದ್ದಾರೆ.
ತಮನ್ನಾ ಭಾಟಿಯಾ ನೇಮಕಾತಿಯ ವಿರುದ್ಧ ಟ್ವೀಟ್ ಮಾಡುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ ಅವರು, ಅತ್ಯಂತ ಅಸಂಬದ್ಧ ಹಾಗೂ ಬೇಜವಾಬ್ದಾರಿಯುತ ನಿರ್ಧಾರ. ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವಂತ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ, ಎಂದು ಆರೋಪಿಸಿದರು.
ಅವರು ಮುಂದಾಗಿ, ರಾಜ್ಯ ಸರ್ಕಾರ ತಮನ್ನಾ ಭಾಟಿಯಾಗೆ ಆರು ಕೋಟಿ ರೂಪಾಯಿ ನೀಡಿ ರಾಯಭಾರಿ ಮಾಡಿದ ಮಾಹಿತಿ ಬಂದಿದ್ದು, ಇದು ಕನ್ನಡಿಗರ ಹಣದ ದುರ್ಬಳಕೆ. ಅಗತ್ಯವಿದ್ದರೆ ಕನ್ನಡದ ಪ್ರತಿಭಾವಂತ ನಟಿಯರನ್ನೇ ನೇಮಿಸಬಹುದಾಗಿತ್ತು, ಎಂದು ಸಲಹೆ ನೀಡಿದರು. ಈ ನೇಮಕಾತಿಯನ್ನು ತಕ್ಷಣವೇ ರದ್ದುಗೊಳಿಸಿ, ಕನ್ನಡಿಗರ 6.20 ಕೋಟಿ ರೂಪಾಯಿಯನ್ನು ಉಳಿಸಬೇಕು. ಪರಭಾಷೆ ನಟಿಗೆ ಮಣೆ ಹಾಕುವುದು ಅಕ್ಷಮ್ಯ. ರಾಜ್ಯ ಸರ್ಕಾರ ಈ ಕುರಿತು ಯಾವ ಪ್ರತಿಕ್ರಿಯೆ ನೀಡುತ್ತದೆ ಎಂಬುದು ಕಾತುರದಿಂದ ನಿರೀಕ್ಷಿಸಲಾಗುತ್ತಿದೆ ಎಂದಿದ್ದಾರೆ.