ಪಾವಗಡ:
ಪಾವಗಡ ಪಟ್ಟಣದ ಪುರಸಭೆಯ ಆವರಣದಲ್ಲಿ ಬಿ-ಖಾತಾ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅರ್ಹ ಫಲಾನುಭವಿಗಳಿಗೆ ಬಿ-ಖಾತಾ ಪ್ರಮಾಣ ಪತ್ರವನ್ನು ಶಾಸಕ ವೆಂಕಟೇಶ್ ವಿತರಿಸಿದರು. ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೇಶ್ ಬಾಬು, ಪುರಸಭಾ ಸದಸ್ಯರಾದ ಕಲ್ಪವೃಕ್ಷ ರವಿ, ವೇಲರಾಜು, ರಾಮಾಂಜಿನಪ್ಪ, ಗೊರ್ತಿ ನಾಗರಾಜ್, ಬಾಲಸುಬ್ರಮಣ್ಯಂ, ಮುಖಂಡರಾದ ಹನುಮಂತಪ್ಪ, ಪೊಟ್ಟು ಗೋವಿಂದಪ್ಪ, ಪುರಸಭಾ ಮುಖ್ಯ ಅಧಿಕಾರಿ ಜಾಫರ್ ಷರೀಫ್ ಸೇರಿ ಹಲವರು ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಶಾಸಕ ಹೆಚ್.ವಿ ವೆಂಕಟೇಶ್, ಬಿ ಖಾತಾ ಮಾಡಿಸಲು ಬ್ರೋಕರ್ ಗಳ ಮೊರೆ ಹೋಗಬೇಡಿ. ಇ ಖಾತೆ ಬಿ ಖಾತೆಗೆ ಅವಕಾಶ ಕಲ್ಪಿಸಿದ್ದು ಅದನ್ನು ಸದುಪಯೋಗ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು. ಪಾವಗಡ ನಗರ ಪ್ರದೇಶಗಳಲ್ಲಿ ತಮ್ಮ ಆಸ್ತಿಯನ್ನು ಭದ್ರಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಇ-ಖಾತಾ ಆಂದೋಲನವನ್ನು ಕೈಗೊಂಡಿದ್ದು, ಈ ನಿಟ್ಟಿನಲ್ಲಿ ನಗರದ ನಾಗರೀಕರು ಇ-ಖಾತೆಗಳನ್ನು ಮಾಡಿಸಿಕೊಂಡು ತಮ್ಮ ಆಸ್ತಿಗಳನ್ನು ಭದ್ರಮಾಡಿಕೊಳ್ಳಿ ಎಂದು ತಿಳಿಸಿದರು.
ಪುರಸಭಾಧ್ಯಕ್ಷ ರಾಜೇಶ್ ಮಾತನಾಡಿ ಪಾವಗಡ ಪಟ್ಟಣದ ಪ್ರಮುಖ ಬಡಾವಣೆಗಳಿಗೆ ಪುರಸಭೆಯಿಂದ ಸೌಲಭ್ಯ ನೀಡಲಾಗುತ್ತಿದೆ. ಈ ಹಿಂದೆ ಖಾತಾ ಸಮಸ್ಯೆಗಳಿಂದ ರೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಖಾತೆಗಳನ್ನು ಮಾಡಿಸಿಕೊಂಡಿದ್ದು, ಮತ್ತು ಶಾಂತಿನಗರ ಬನಶಂಕರಿ ವಿನಾಯಕ ನಗರ ಭಾಗಗಳ ಕೆಲವೊಂದು ನಿವೇಶನಗಳು ಗ್ರಾಮ ಪಂಚಾಯಿತಿಯಲ್ಲಿ ನೋಂದಣಿಯಾಗಿದ್ದು ಜಿಲ್ಲಾಧಿಕಾರಿಗಳ ಮತ್ತು ಅಧಿಕಾರಿಗಳ ಸಮನ್ವಯತೆಯಿಂದ ಪಾವಗಡ ಪುರಸಭೆಗೆ ಹಸ್ತಾಂತರ ಮಾಡಿಸುವಂತೆ ಶಾಸಕರಿಗೆ ಇದೇ ವೇಳೆ ಮನವಿ ಮಾಡಿಕೊಂಡರು.
ಪುರಸಭಾ ಸದಸ್ಯ ಮಹಮ್ಮದ್ ಇಮ್ರಾನ್ ಮಾತನಾಡಿ 30 ವರ್ಷಗಳ ಹಿಂದೆ ಬಡ ಜನರು ಕುಂಟೆ ಲೆಕ್ಕದಲ್ಲಿ ನಿವೇಶನಗಳನ್ನು ತೆಗೆದುಕೊಂಡು ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಸದ್ಯ ಅವರಿಗೆ ಖಾತೆಯ ಆಗದ ಪರಿಸ್ಥಿತಿಯಲ್ಲಿದ್ದು ಅಧಿಕಾರಿಗಳ ಜೊತೆ ಶಾಸಕರು ಮಾತನಾಡಿ ಸಮಸ್ಯೆ ಬಗೆಹರಿಸಬೇಕೆಂದು ಮನವಿ ಮಾಡಿದರು.