ತುಮಕೂರು: ಖಾಸಗಿ ಶಾಲೆಯಿಂದ ಇದೆಂಥಾ ಅಮಾನವೀಯ ಕೃತ್ಯ!

ಲೂರ್ದ ಮಾತಾ ಶಾಲೆ ತುಮಕೂರು
ಲೂರ್ದ ಮಾತಾ ಶಾಲೆ ತುಮಕೂರು
ತುಮಕೂರು

ತುಮಕೂರು:

ತಮಗೆ ಅದೇಷ್ಟೇ ಕಷ್ಟ ಇರಲಿ. ತಮ್ಮ ಮಕ್ಕಳು ಚೆನ್ನಾಗಿರಬೇಕು. ಅವರಿಗೆ ಒಂದೊಳ್ಳೆ ವಿದ್ಯಾಭ್ಯಾಸ ಕೊಡಿಸಬೇಕು ಅಂತಾ ಪ್ರತಿಯೊಬ್ಬ ತಂದೆ-ತಾಯಿಯೂ ಆಸೆಪಡುತ್ತಾರೆ. ಅದಕ್ಕೋಸ್ಕರ ತಾವು ಒಂದೊತ್ತು ಊಟ ಬಿಟ್ಟಾದರೂ ಮಕ್ಕಳನ್ನು ಒಳ್ಳೆಯ ಶಾಲೆಗೆ ಸೇರಿಸಿ ಓದಿಸೋಕೆ ಮುಂದಾಗ್ತಾರೆ. ಆದರೆ ಕೆಲವು ಖಾಸಗಿ ಶಾಲೆಗಳು ತಮ್ಮ ಹಣಬಾಕತನದಿಂದ ಬಡ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಶೈಕ್ಷಣಿಕ ನಗರಿ ಎಂದೇ ಕರೆಸಿಕೊಳ್ಳುವ ತುಮಕೂರಿನಲ್ಲಿ ಇಂಥದ್ದೇ ಒಂದು ಆರೋಪ ಕೇಳಿಬಂದಿದೆ.

ಹೌದು ಖಾಸಗಿ ಶಾಲೆಯೊಂದರ ಆಡಳಿತ ಮಂಡಳಿ ವಿದ್ಯಾರ್ಥಿಗಳ ಜೊತೆ ಅಮಾನವೀಯವಾಗಿ ನಡೆದುಕೊಂಡಿರುವ ಬಗ್ಗೆ ಆರೋಪ ಕೇಳಿಬಂದಿದೆ. ಪುಟಾಣಿ ಮಕ್ಕಳ ಜೊತೆ ಅಮಾನುಷವಾಗಿ ನಡೆದುಕೊಂಡಿದ್ದು, ಫೀಸ್‌ ಬಾಕಿ ಉಳಿಸಿಕೊಂಡಿದ್ದಕ್ಕೆ ಮಕ್ಕಳಿಗೆ ನರಕದರ್ಶನ ಮಾಡಿಸಿದ್ದಾರೆ. ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ವಿಚಿತ್ರ ಶಿಕ್ಷೆಯನ್ನು ನೀಡಿದ್ದು, ಈ ಬಗ್ಗೆ ಬಡ ಪೋಷಕರೊಬ್ಬರು ಕಣ್ಣೀರು ಹಾಕಿದ್ದಾರೆ.

ನಗರದ ಹೊರಪೇಟೆಯಲ್ಲಿರುವ ಲೂರ್ದಮಾತಾ ಶಾಲೆಯ ವಿರುದ್ಧ ಈ ಆರೋಪ ಕೇಳಿಬಂದಿದೆ. ಫೀಸ್‌ ಕಟ್ಟಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಗಳ ಜೊತೆ ಶಾಲೆಯ ಆಡಳಿತ ಮಂಡಳಿ ಹೀಗೆ ಅಮಾನವೀಯವಾಗಿ ನಡೆಸಿಕೊಂಡು, ಫೀಸ್‌ ಕಟ್ಟದ ವಿದ್ಯಾರ್ಥಿಗಳನ್ನು ಉಳಿದ ವಿದ್ಯಾರ್ಥಿಗಳ ಜೊತೆ ಕೂರಿಸುವ ಬದಲು ಪ್ರತ್ಯೇಕವಾಗಿ ಕೂರಿಸುತ್ತಿದ್ದಾರಂತೆ. ಜೊತೆಗೆ ಪರೀಕ್ಷೆ ಬರೆಯೋದಕ್ಕೂ ಅವಕಾಶ ಕೊಟ್ಟಿಲ್ಲವಂತೆ.

ಲೂರ್ದಮಾತಾ ಶಾಲೆಯಲ್ಲಿ ೪ನೇ ತರಗತಿ ಓದುತ್ತಿರುವ ಕುಶಾಲ್‌ ತಂದೆ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಪ್ರತಿ ವರ್ಷ ೧೮ ಸಾವಿರ ಫೀಸ್‌ ಕಟ್ಟುತ್ತಿದ್ದರಂತೆ. ಆದರೆ ಈ ವರ್ಷ ಅದನ್ನು ೨೦ ಸಾವಿರಕ್ಕೆ ಏರಿಸಿದ್ದಾರಂತೆ. ಸ್ವಲ್ಪ ಹಣದ ಸಮಸ್ಯೆಯಿದ್ದ ಕಾರಣ ಕುಶಾಲ್‌ ತಂದೆ ಮೊದಲು ಹತ್ತು ಸಾವಿರ ರೂಪಾಯಿ ಕಟ್ಟಿದ್ದರಂತೆ. ಬಳಿಕ ಫೀಸ್‌ ಕಟ್ಟಲು ಒತ್ತಡ ಹೆಚ್ಚಾದಾಗ, ಮೊಬೈಲ್‌ ಮಾರಿ ನಾಲ್ಕು ಸಾವಿರ ರೂಪಾಯಿಯನ್ನು ತಂದು ಕಟ್ಟಿದ್ದಾರಂತೆ. ಆದರೆ ಪೂರ್ತಿ ಹಣವನ್ನು ಕಟ್ಟೋವರೆಗೂ ನಾವು ಪರೀಕ್ಷೆ ಬರೆಯೋದಕ್ಕೆ ಅವಕಾಶ ಕೊಡಲ್ಲ ಅಂತಾ ಶಾಲೆಯವರು ಪಟ್ಟು ಹಿಡಿದಿದ್ದಾರಂತೆ. ರಿಕ್ವೇಸ್ಟ್‌ ಮಾಡಿಕೊಂಡರೂ ಸುಮ್ಮನಾಗ್ತಿಲ್ಲವಂತೆ.

ಪರೀಕ್ಷೆಗೆ ಕೂರಿಸುತ್ತಿಲ್ಲ ಅನ್ನೋದು ಒಂದು ಕಡೆಯಾದರೆ, ಫೀಸ್‌ ಕಟ್ಟದ ವಿದ್ಯಾರ್ಥಿಗಳನ್ನು ತರಗತಿಯಲ್ಲಿಯೂ ಪ್ರತ್ಯೇಕವಾಗಿ ಕೂರಿಸುತ್ತಿದ್ದಾರಂತೆ. ಇದು ಚಿಕ್ಕಮಕ್ಕಳ ಮನಸ್ಸಿನ ಮೇಲೆ ಭಾರೀ ಪ್ರಭಾವ ಬೀರಿದೆ. ಇದರಿಂದ ಬೇಸತ್ತ ಕುಶಾಲ್‌, ಅಳುತ್ತಾ ಮನೆಗೆ ಹೋಗಿದ್ದಾನೆ. ಕೇವಲ ಕುಶಾಲ್‌ ಮಾತ್ರವಲ್ಲ, ಫೀಸ್‌ ಕಟ್ಟದ ಎಲ್ಲಾ ಮಕ್ಕಳಿಗೂ ಶಾಲೆಯ ಆಡಳಿತ ಮಂಡಳಿ ಇದೇ ರೀತಿ ಶಿಕ್ಷೆ ನೀಡುತ್ತಿರುವ ಆರೋಪ ಕೇಳಿಬಂದಿದೆ. ನೀವು ಫೀಸ್‌ ಕೇಳೋದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ದುಡ್ಡು ಕಟ್ಟಿಲ್ಲ ಎಂಬ ಕಾರಣಕ್ಕೆ ಅವರನ್ನು ಹೀಗೆ ಪ್ರತ್ಯೇಕವಾಗಿ ಕೂರಿಸಿ, ಕೀಳರಿಮೆ ಮೂಡುವಂತೆ ಮಾಡಿ, ನಾಳೆ ಆ ಮಕ್ಕಳೇನಾದರೂ ಹೆಚ್ಚು ಕಡಿಮೆ ಮಾಡಿಕೊಂಡರೆ ಯಾರು ಗತಿ ಎಂಬುದು ನಮ್ಮ ಪ್ರಶ್ನೆ. ಇದು ಗಂಭೀರ ವಿಚಾರವಾಗಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಮಕ್ಕಳಾ ರಕ್ಷಣಾ ಆಯೋಗ ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ.

 

Author:

...
Editor

ManyaSoft Admin

Ads in Post
share
No Reviews