ಗುಬ್ಬಿ:
ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿಯ ಇತಿಹಾಸ ಪ್ರಸಿದ್ದ ಪುರ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು. ರಥೋತ್ಸವ ಹಿನ್ನೆಲೆ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಗೆ ಸುಪ್ರಭಾತ ಸೇವೆ, ಪಂಚಾಮೃತ ಅಭಿಷೇಕ ಸೇರಿ ವಿಶೇಷ ಪೂಜಾ ಕೈಂಕರ್ಯಗಳನ್ನು ಮುಂಜಾನೆಯಿಂದಲೇ ನಡೆಸಲಾಯಿತು. ಇನ್ನು ರಥೋತ್ಸವ ಹಿನ್ನೆಲೆ ದೇಗುಲ ಹಾಗೂ ರಥಕ್ಕೆ ಹಲವು ಬಗೆಯ ಹೂಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು.
ರಥೋತ್ಸವಕ್ಕೂ ಮುನ್ನ ಸಿದ್ದಲಿಂಗೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ವಾದ್ಯಗೋಷ್ಠಿಯೊಂದಿಗೆ ಕರೆ ತರಲಾಯಿತು. ಇನ್ನು ಬೆಳ್ಳಾವಿ ಕಾರದಮಠದ ಶ್ರೀ ಕಾರದ ವೀರಬಸವ ಮಹಾಸ್ವಾಮಿಗಳು ರಥೋತ್ಸವಕ್ಕೆ ಚಾಲನೆ ನೀಡಿದ್ದು, ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥವನ್ನು ಎಳೆಯಲಾಯಿತು. ರಥ ಎಳೆಯುತ್ತಿದ್ದಂತೆ ಭಕ್ತರು ಬಾಳೆಹಣ್ಣು, ದವನ ಎಸೆದು ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡರು.
ರಥೋತ್ಸವಕ್ಕೆ ಬಂದಿದ್ದ ಸಾವಿರಾರು ಭಕ್ತರಿಗೆ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ದಾಸೋಹ ವ್ಯವಸ್ಥೆಯನ್ನು ಮಾಡಲಾಗಿತ್ತು. ಬಿಸಿಲಿನ ಝಳಕಕ್ಕೆ ಬಸವಳಿದಿದ್ದ ಭಕ್ತರಿಗೆ ಮಜ್ಜಿಗೆ, ಪಾನಕವನ್ನು ವಿತರಿಸಲಾಯಿತು.