ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಇತ್ತೀಚಿನ ಕಳ್ಳತನಗಳು ಸರಗಳ್ಳತನಗಳು ಮತ್ತು ಸೈಬರ್ ಕ್ರೈಂ ಗಳ ಬಗ್ಗೆ ಹಾಗೂ ವಿವಿಧ ಅಪರಾಧಗಳ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು . ಅಪರಾದ ತಡೆಗಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ ಬಹು ಮುಖ್ಯವಾದದ್ದು. ಕ್ಷಣ ಮಾತ್ರದಲ್ಲಿ ಆಗುವ ಅಹಿತಕರ ಘಟನೆಗಳ ಬಗ್ಗೆ ನಾವು ಎಚ್ಚೆತ್ತುಕೊಳ್ಳದೆ ಹೋದಲ್ಲಿ ನಾವು ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ. ಈ ದಿಸೆಯಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ದುರ್ಬಳಕೆ, ಸೈಬರ್ ಕ್ರೈಂ ಇವುಗಳ ಬಗ್ಗೆ ಜಾಗೃತಿ ಹೊಂದುವುದು ಅತಿ ಅವಶ್ಯಕ ಎಂದು ಕಳ್ಳಂಬೆಳ್ಳ ಪಿ.ಎಸ್ ಐ ರವೀಂದ್ರನಾಥ ತಿಳಿಸಿದರು.
ಇನ್ನು ಕಾರ್ಯಕ್ರಮದಲ್ಲಿ ಸೈಬರ್ ಅಪರಾಧ ಜಾಗೃತಿ ಕಾರ್ಯಕ್ರಮವನ್ನು ಉದೇಶಿಸಿ ಮಾತನಾಡಿದ ಅವರು, ಇತ್ತೀಚೆಗೆ ಅಂತರ್ಜಾಲದ ದುರುಪಯೋಗ ಹೆಚ್ಚಾಗುತ್ತಿದೆ. ಜನರು ಒಂದು ಸಣ್ಣ ತಪ್ಪಿನಿಂದಾಗಿ ಹಣ ಹಾಗೂ ಮಹತ್ವದ ಮಾಹಿತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಮೂಲಕ ತಿಳಿದೋ ಅಥವಾ ತಿಳಿಯದೆಯೋ ವಿವಿಧ ಸಂಕಷ್ಟಗಳಿಗೆ ಸಿಲುಕಿ ನಲುಗುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕಳ್ಳಂಬೆಳ್ಳ ಠಾಣೆಯ ಎ ಎಸ್ ಐ ಶ್ರೀನಿವಾಸ್ ಮುಖ್ಯಪೇದೆಗಳಾದ ಶಾಹಿದ್, ಕೃಷ್ಣಮೂರ್ತಿ ,ಉಮೇಶ್ ಹಾಗೂ ರಜಿತ್ ಹಾಜರಿದ್ದರು ಈ ಕಾರ್ಯಕ್ರಮದಲ್ಲಿ ಸರಗಳ್ಳತನ ಮತ್ತು ಇತ್ತೀಚಿನ ಸೈಬರ್ ಅಪರಾಧಗಳ ಬಗ್ಗೆ ಅನಗತ್ಯ ಮೊಬೈಲ್ ಲಿಂಕ್ ಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಲಾಯಿತು.