ರಾಜ್ಯ : ಕರ್ನಾಟಕದಲ್ಲಿ ಮದ್ಯದ ದರ ಏರಿಕೆ ಮತ್ತು ಲೈಸೆನ್ಸ್ ಶುಲ್ಕದ ದುಪ್ಪಟ್ಟು ಹೆಚ್ಚಳದ ವಿರುದ್ಧ ರಾಜ್ಯದ ಮದ್ಯ ಮಾರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇವುಗಳ ವಿರೋಧವಾಗಿ ಈ ತಿಂಗಳ 29ರಿಂದ ಮದ್ಯದ ಅಂಗಡಿಗಳು ಮತ್ತು ಬಾರ್-ರೆಸ್ಟೋರೆಂಟ್ಗಳು ಬಂದ್ ಮಾಡುವುದಾಗಿ ರಾಜ್ಯದ ಮದ್ಯ ಮಾರಾಟಗಾರರ ಸಂಘ ತೀರ್ಮಾನಿಸಿದೆ.
ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ಮೇಲೆ ಮದ್ಯದ ದರ ಮೂರು ಬಾರಿ ಹೆಚ್ಚಿಸಲಾಗಿದೆ. ಇದರ ಜೊತೆಗೆ ಮದ್ಯ ಮಾರಾಟದ ಪರವಾನಗಿ ಶುಲ್ಕದಲ್ಲಿ ಬಹಳ ಏರಿಕೆ ಆಗಿದ್ದು, ಇದರಿಂದ ಮದ್ಯ ಮಾರಾಟಗಾರರಿಗೆ ಹಾನಿ ಸಂಭವಿಸಿದೆ.
ಲೈಸೆನ್ಸ್ ದರ ಎಷ್ಟಿದೆ? ಹೆಚ್ಚಳದ ಬಳಿಕ ಎಷ್ಟಾಗಲಿದೆ?
- CL9 ಬಾರ್ ಆ್ಯಂಡ್ ರೆಸ್ಟೋರೆಂಟ್ ಲೈಸೆನ್ಸ್ ಶುಲ್ಕವು ಹಳೆಯ 8,62,000 ರೂ.ದಿಂದ 15,00,000 ರೂ.ಗೆ ಏರಿಸಿ, ಸೆಸ್ ಸೇರಿ ಒಟ್ಟು 17,25,000 ರೂ. ಆಗಿದೆ.
- CL6A ಸ್ಟಾರ್ ಹೋಟೆಲ್ ಲೈಸೆನ್ಸ್ ಶುಲ್ಕ ಹಳೆಯ 9,75,000 ರೂ.ದಿಂದ 20,00,000 ರೂ.ಗೆ ಏರಿಸಿ, ಸೆಸ್ ಸೇರಿ ಒಟ್ಟು 23,00,000 ರೂ. ಆಗಿದೆ.
- CL7 ಬೋರ್ಡಿಂಗ್ ಆ್ಯಂಡ್ ಲಾಡ್ಜಿಂಗ್ ಲೈಸೆನ್ಸ್ ಶುಲ್ಕ 9,75,000 ರೂ.ದಿಂದ 17,00,000 ರೂ.ಗೆ ಏರಿಸಿ, ಸೆಸ್ ಸೇರಿ ಒಟ್ಟು 19,55,000 ರೂ. ಆಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇ 26ರಂದು ಮದ್ಯ ಮಾರಾಟಗಾರರ ಸಂಘದ ಸದಸ್ಯರೊಂದಿಗೆ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಮದ್ಯ ಮಾರಾಟಗಾರರ ಬೇಡಿಕೆಗಳನ್ನು ಸರ್ಕಾರ ಪೂರೈಸದಿದ್ದರೆ, 29ರಿಂದ ನಿರಂತರವಾಗಿ ಮದ್ಯದ ಅಂಗಡಿಗಳನ್ನು ಬಂದ್ ಮಾಡಲಿವೆ ಎಂದು ಮದ್ಯ ಮಾರಾಟಗಾರರು ತೀರ್ಮಾನಿಸಿದ್ದಾರೆ.
ಮದ್ಯಪ್ರಿಯರು ಮತ್ತು ಸಾರ್ವಜನಿಕರು ಸರ್ಕಾರದ ಈ ಕ್ರಮಗಳ ಬಗ್ಗೆ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿ, ಮೊದಲು ಮದ್ಯ ದರ ಮತ್ತು ಪರವಾನಗಿ ಶುಲ್ಕಗಳನ್ನು ಕಡಿಮೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಒಟ್ಟಿನಲ್ಲಿ ನಿರಂತರವಾಗಿ ಮದ್ಯದ ದರ ಏರಿಕೆ ಮಾಡುವುದು ಮತ್ತು ಮದ್ಯ ಮಾರಾಟದ ಲೈಸೆನ್ಸ್ ದರ ಏರಿಕೆ ಖಂಡಿಸಿ ರಾಜ್ಯ ಮದ್ಯ ಮಾರಾಟಗಾರರು ಬಂದ್ಗೆ ಪ್ಲಾನ್ ಮಾಡುತ್ತಿದ್ದು, ಇದಕ್ಕೆ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.