ಬೆಂಗಳೂರು :
ಮಹತ್ವದ ಬೆಳವಣಿಗೆಯಲ್ಲಿ ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್ ಪಾಟೀಲ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸವಾಲನ್ನು ಸ್ವೀಕರಿಸಿರುವ ಸಚಿವ ಶಿವಾನಂದ ಎಸ್ ಪಾಟೀಲ್, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ಪೀಕರ್ ಯುಟಿ ಖಾದರ್‌ಗೆ ಪತ್ರ ಬರೆದಿದ್ದಾರೆ. ಆದರೆ ಯತ್ನಾಳ್ ರಾಜೀನಾಮೆ ನೀಡಿ ಅದು ಅಂಗೀಕಾರವಾದರೆ ಮಾತ್ರ ತಮ್ಮ ರಾಜೀನಾಮೆಯನ್ನು ಅಂಗೀಕರಿಸುವಂತೆ ಮನವಿ ಮಾಡಿದ್ದಾರೆ.
ವಿಜಯಪುರ ನಗರ ಕ್ಷೇತ್ರದಿಂದ ಯತ್ನಾಳ್ ವಿರುದ್ದ ಒಮ್ಮೆ ಚುನಾವಣೆ ಸ್ಪರ್ಧೆ ಮಾಡುವ ಆಸೆ ಇದೆ ಎಂದು ಸಚಿವ ಶಿವಾನಂದ ಪಾಟೀಲ್ ಕೆಲವು ದಿನ ಹಿಂದೆ ಹೇಳಿದ್ದರು, ಇದಕ್ಕೆ ತಿರುಗೇಟು ನೀಡಿದ್ದ ಬಸನಗೌಡ ಪಾಟೀಲ್ ಯತ್ನಾಳ್, ಶಿವಾನಂದ ಪಾಟೀಲ್ ಅವರಪ್ಪನಿಗೆ ಹುಟ್ಟಿದ್ರೆ ನನ್ನ ವಿರುದ್ದ ಸ್ಪರ್ಧೆ ಮಾಡಲಿ. ಅವರ ಮನೆ ಹೆಸರು ಪಾಟೀಲ್ ಅಲ್ಲ ʼಹಚಡದʼ ಎಂದು ಹೇಳಿದರು. ಮುಂದುವರಿದು, ನಿಮ್ಮಪ್ಪ ನೀವು ಸೇರಿ ನಿಮ್ಮ ಸರ್ ನೇಮ್ ಬದಲಾಯಿಸಿಕೊಂಡವರು. ರಾಜಕಾರಣಕ್ಕಾಗಿ ಪಾಟೀಲ್ ಎಂದು ಮಾಡಿಕೊಂಡಿದ್ದಾರೆಂದು ವಾಗ್ದಾಳಿ ನಡೆಸಿದರು.
ಇನ್ನು ಯತ್ನಾಳ್ ಸವಾಲನ್ನು ಸ್ವೀಕರಿಸಿ ಈ ಕ್ರಮ ಕೈಗೊಂಡಿರುವುದಾಗಿ ಸ್ವೀಕರ್ ಯುಟಿ ಖಾದರ್ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಯತ್ನಾಳ್ ಸವಾಲು ಸ್ವೀಕರಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡುತ್ತಿದ್ದೇನೆ. ಅವರು ನಮ್ಮ ಪೂರ್ವಜರ ಮನೆತನದ ಹೆಸರಿನ ಬಗ್ಗೆ ತಪ್ಪಾಗಿ ಮಾತನಾಡಿದರೂ, ಅವರು ಸಹ ರಾಜೀನಾಮೆ ನೀಡಲಿ, ಅದು ಅಂಗೀಕಾರವಾದರೆ ಮಾತ್ರ ತಮ್ಮ ರಾಜೀನಾಮೆಯನ್ನು ಸ್ವೀಕರಿಸಬೇಕು ಎಂದು ಶಿವಾನಂದ ಪಾಟೀಲ ಹೇಳಿದ್ದಾರೆ.
ಶಿವಾನಂದ ಪಾಟೀಲ್ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಈ ರೀತಿ ಬರೆದಿದ್ದಾರೆ. “ ವಿಜಯಮರ ನಗರ ಶಾಸಕರಾದ ಬಸನಗೌಡ ಆರ್. ಪಾಟೀಲ್ ಅವರು ತಮ್ಮ ವಿಜಯಪುರ ಮತಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ನನ್ನ ವಿರುದ್ದ ಬಸವನ ಬಾಗೇವಾಡಿ ಮತಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಸವಾಲು ಹಾಕಿದ್ದಾರೆ. ನಾನು ಅವರ ಸವಾಲನ್ನು ಸ್ವೀಕರಿಸಿ, ಅವರ ವಿರುದ್ದ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಹಾಗಾಗಿ ನಾನು ಪ್ರತಿನಿಧಿಸುತ್ತಿರುವ ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಪಾಟೀಲರ ರಾಜೀನಾಮೆ ಅಂಗೀಕಾರವಾದರೆ ಮಾತ್ರ ದಯಮಾಡಿ ನನ್ನ ರಾಜೀನಾಮೆಯನ್ನು ಅಂಗೀಕರಿಸುವಂತೆ ತಮ್ಮಲ್ಲಿ ಕೋರುತ್ತೇನೆ”. ಎಂದು ಬರೆದಿದ್ದಾರೆ.