ಶಿರಾ :
ಶಿರಾ ನಗರಸಭೆ ವ್ಯಾಪ್ತಿಯಲ್ಲಿನ ಕಲ್ಲುಕೋಟೆಯಲ್ಲಿ ನಗರಸಭೆಗೆ ಒಳಪಡುವ 8 ಎಕರೆ ಜಾಗದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ ಮತ್ತು ಹೌಸಿಂಗ್ ಫಾರ್ ಆಲ್ ಎಂಬ ಯೋಜನೆ ಅಡಿಯಲ್ಲಿ ಬಡಜನರಿಗೆಂದು 1008 ಫ್ಲ್ಯಾಟ್ಗಳನ್ನು ನಿರ್ಮಿಸಲು 2019ರಲ್ಲಿ ಕಾಮಗಾರಿ ಆರಂಭಿಸಲಾಗಿತ್ತು. ಇದರ ಸಂಪೂರ್ಣ ಜವಾಬ್ದಾರಿಯನ್ನು ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ ಪಡೆದಿತ್ತು. ಆದರೆ ಕಾಮಗಾರಿ ಆರಂಭವಾಗಿ ಐದಾರು ವರ್ಷಗಳೇ ಕಳೆದರೂ ಕಾಮಗಾರಿ ಮಾತ್ರ ಮುಗಿದಿಲ್ಲ. ಹೀಗಾಗಿ ಸ್ವಂತ ಮನೆಯನ್ನು ಹೊಂದುವ ಆಸೆಯಲ್ಲಿದ್ದ ಬಡಜನರ ಕನಸು ಕನಸಾಗಿಯೇ ಉಳಿಯುವಂತಾಗಿದೆ.
ಎರಡು ಅಂತಸ್ತಿನ ಕಟ್ಟಡದಲ್ಲಿ ಒಟ್ಟು 1008 ಫ್ಲ್ಯಾಟ್ಗಳನ್ನು ನಿರ್ಮಿಸುವ ಯೋಜನೆ ಇದಾಗಿತ್ತು. ಆದರೆ ಸ್ವಂತ ಮನೆ ಹೊಂದುವ ಕನಸನ್ನು ಹೊತ್ತಿದ್ದ ಜನರಿಗೆ ದೊಡ್ಡ ಶಾಕ್ ಎದುರಾಗಿದೆ. ಯಾಕಂದರೆ ಈ ಕಟ್ಟಡ ಕಾಮಗಾರಿ ಕಳಪೆಯಾಗಿರೋ ಬಗ್ಗೆ ಅನುಮಾನ ವ್ಯಕ್ತವಾಗ್ತಿದೆ. ಕಾಂಕ್ರೀಟ್ ಸ್ಲ್ಯಾಬ್ಗಳಿಂದ ಕಟ್ಟಿರುವ ಮನೆಗಳು ಈಗಾಗಲೇ ಬಿರುಕು ಬಿಟ್ಟಿದ್ದು, ವಾಸಕ್ಕೆ ಯೋಗ್ಯವಾ ಅನ್ನೋ ಪ್ರಶ್ನೆ ಎದ್ದಿದೆ. ಅಧಿಕಾರಿಗಳು ನೀಡ್ತಿರೋ ಮಾಹಿತಿ ಪ್ರಕಾರ ಮೊದಲ ಹಂತದಲ್ಲಿ ಕೇವಲ 252 ಮನೆಗಳ ಕಾಮಗಾರಿ ಶೇ.60ರಷ್ಟು ಮುಗಿದಿದೆಯಂತೆ.
ಇನ್ನು 15 ವರ್ಷದಿಂದ ಸೈಟ್ ಕೊಡ್ತಾರೆ ಅಂತ ನಿವೇಶನ ವಂಚಿತರು ಕಾಯ್ತಾ ಇದ್ದು, ಎಷ್ಟೇ ಅರ್ಜಿ ಕೊಟ್ಟರೂ ಯಾವುದೇ ಉಪಯೋಗವಿಲ್ಲ, ಲೈಔಟ್ ಗಳನ್ನು ಕಟ್ತಾ ಇದ್ದೀವಿ ಅಂತಿದ್ದಾರೆ. ಆದರೆ ಇಷ್ಟು ವರ್ಷವಾದರೂ ಯಾವುದು ಇಲ್ಲ, ಹೀಗಾಗಿ ಬಾಡಿಗೆ ಮನೆಯಲ್ಲಿ ಬಾಡಿಗೆ ಕಟ್ಟಿಕೊಂಡು ಜೀವನ ಮಾಡ್ತಾ ಇದ್ದೀವಿ, ಅಲ್ಲದೇ ಕೆಲವರು ರೋಡ್ ಸೈಡ್ ಗಳಲ್ಲಿ ಮನೆಗಳನ್ನು ಕಟ್ಟಿಕೊಂಡು ಜೀವನ ಮಾಡ್ತಾ ಇದ್ದೀವಿ ಎಂದು ಸ್ಥಳೀಯರು ಆರೋಪಿಸಿದರು.
ಈ ಯೋಜನೆಯಲ್ಲಿ 1008 ಮನೆಗಳಿಗೆ ಸರ್ಕಾರದಿಂದ 55 ಕೋಟಿ ರೂ ಮಂಜೂರಾಗಿದೆ. ಒಂದು ಮನೆಗೆ 5.16 ಲಕ್ಷ ರೂಪಾಯಿ ತಗುಲಿದ್ದು ಕೇಂದ್ರ ಸರ್ಕಾರದಿಂದ 1.5 ಲಕ್ಷ ಮತ್ತು ರಾಜ್ಯ ಸರ್ಕಾರದಿಂದ 2 ಲಕ್ಷ ರೂಗಳನ್ನು ನೀಡಲಾಗುತ್ತಿದೆ. ಉಳಿದ ಹಣವನ್ನು ಅರ್ಹ ಬಡ ಫಲಾನುಭವಿಗಳು ತುಂಬಬೇಕಿದೆ. ಮನೆಗಳ ಕಾಮಗಾರಿ ಪೂರ್ಣಗೊಂಡ ನಂತರ ನಗರಸಭೆಗೆ ಹಸ್ತಾಂತರಿಸಲಾಗುತ್ತೆ. ಆದರೆ ಕಾಮಗಾರಿ ಶುರುವಾಗಿ ವರ್ಷಗಳೇ ಕಳೆದರೂ ಇನ್ನು ಕಾಮಗಾರಿಯೇ ಮುಗಿದಿಲ್ಲ. ಹೀಗಾಗಿ ಇದರ ಬಗ್ಗೆ ಅಧಿಕಾರಿಗಳು ಏನು ಕ್ರಮ ಕೈಗೊಳ್ತಾರೆ ಅನ್ನೋದನ್ನು ಕಾದುನೋಡಬೇಕಿದೆ.