ಶಿರಾ:
ಶಿರಾ ತಾಲೂಕು ಮಾಗೋಡು ಗೊಲ್ಲರಹಟ್ಟಿಯಲ್ಲಿರುವ ಶ್ರೀ ಕಂಬದ ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವ ಸಾವಿರಾರು ಭಕ್ತರ ಸಮುಖದಲ್ಲಿ ಜರುಗಿತು. ಮಾಗೋಡು ರಂಗನಾಥ ಸ್ವಾಮಿ ರಥೋತ್ಸವ ಹೂವಿನ ರಥೋತ್ಸವ ಎಂದೇ ಖ್ಯಾತಿ ಪಡೆದಿದ್ದು, ರಾಜ್ಯದ ಮೂಲೆ ಮೂಲೆಗಳಿಂದಲೂ ಸಾವಿರಾರು ಮಂದಿ ಭಕ್ತರು ಆಗಮಿಸುತ್ತಾರೆ. ಇಲ್ಲಿ ತಮ್ಮ ಇಷ್ಟಾರ್ಥ ಪ್ರಾಪ್ತಿಯಾದರೆ ಹೂವಿನ ತುಲಾಭಾರ ಸೇರಿದಂತೆ ಸಾವಿರಾರು ರೂಪಾಯಿಗಳ ಹೂವನ್ನು ತಂದು ಶ್ರೀ ಕಂಬದ ರಂಗನಾಥಸ್ವಾಮಿ ರಥಕ್ಕೆ ಹಾಕುತ್ತಾರೆ. ರಥೋತ್ಸವದಲ್ಲಿ ರಥದ ತುಂಬೆಲ್ಲಾ ಹೂವಿನಿಂದ ತುಂಬಿರೋದು ಇಲ್ಲಿನ ವಿಶೇಷವಾಗಿದೆ.
ಶ್ರೀ ರಂಗನಾಥ ಸ್ವಾಮಿಯು ಕಂಬದಲ್ಲಿ ಮೂಡಿರುವ ಕಾರಣಗಳಿಂದ ಕಂಬದರಂಗ ಎಂದು ಕರೆದು ಭಕ್ತರು ಆರಾಧನೆ ಮಾಡುತ್ತಾರೆ. ಇಲ್ಲಿ ಹೂವೇ ದೇವರಿಗೆ ಪ್ರಿಯವಾದ ವಸ್ತು. ಹೂವಿನ ಹಾರವನ್ನು ತೇರಿಗೆ ಹಾಕುವುದು ವಾಡಿಕೆ ಮಾತ್ರವಲ್ಲ, ಭಕ್ತರು ತಮ್ಮ ಇಷ್ಟಾರ್ಥಗಳ ಈಡೇರಿಕೆಗೆ ಹರಕೆಯ ರೂಪದಲ್ಲಿ ಹೂವನ್ನು ಅರ್ಪಿಸುವುದು ಇಲ್ಲಿನ ಸಂಪ್ರದಾಯ. ಕಂಬದ ರೂಪದಲ್ಲಿ ಹೊರಬಂದ ಶ್ರೀ ಹರಿಯು ವೈಕುಂಠದಿಂದ ಧರೆಗಿಳಿದು ಬಂದು ಭಕ್ತರ ಕಷ್ಟ ಈಡೇರಿಸುತ್ತಾನೆಂದು ಭಕ್ತರು ಭಕ್ತಿಯಿಂದ ಹೂ ಅರ್ಪಿಸುವುದು ವಾಡಿಕೆಯಾಗಿದೆ.
ಇನ್ನು ಪ್ರತಿವರ್ಷ ಮಾಘ ಮಾಸ ತಿಂಗಳಲ್ಲಿ ಇಲ್ಲಿ ಒಂದು ವಾರದ ಕಾಲ ಬೃಹತ್ ಜಾತ್ರೆ ನಡೆಯುತ್ತದೆ. ಜಲಧಿ, ಆ ನಂತರ ನಡೆಯುವ ಬೃಹತ್ ಹೂವಿನ ತೇರು ರಾಜ್ಯದಲ್ಲಿಯೇ ಪ್ರಸಿದ್ಧಿ. ಲಕ್ಷಾಂತರ ಭಕ್ತರು ಹೂವಿನ ತೇರಿಗೆ ಸೇರಲಿದ್ದು, ರಥ ಎಳೆಯುತ್ತಿದ್ದಂತೆ ರಥಕ್ಕೆ ಬಾಳೆಹಣ್ಣು, ದವನ ಎಸೆದು ಇಷ್ಟಾರ್ಥ ಸಿದ್ದಿಗೆ ಪ್ರಾರ್ಥಿಸುತ್ತಾರೆ.