ಶಿರಾ : ರತ್ನದಂತೆ ಹೊಳೆಯುತ್ತಿದೆ ರತ್ನಸಂದ್ರ ಗ್ರಾ.ಪಂ ನೂತನ ಕಚೇರಿ

ಶಿರಾ :

ಗ್ರಾಮ ಪಂಚಾಯ್ತಿಗಳನ್ನು ಪ್ರಜಾಪ್ರಭುತ್ವದ ಬುನಾದಿ ಅಂತಲೇ ಕರೆಯಲಾಗುತ್ತೆ. ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯ್ತಿಗಳಿಗೆ ತನ್ನದೇ ಆದಂತಹ ಅಧಿಕಾರವಿದೆ. ಆದರೆ ಹತ್ತಾರು ಕಾರಣಗಳಿಂದಾಗಿ ಗ್ರಾಮ ಪಂಚಾಯ್ತಿಗಳು ಸ್ವತಂತ್ರವಾಗಿ ಕೆಲಸ ಮಾಡೋದಕ್ಕೆ ಸಾಧ್ಯವಾಗ್ತಿಲ್ಲ ಅನ್ನೋ ಆರೋಪ ಆಗಾಗ ಕೇಳಿಬರ್ತಾನೆ ಇರುತ್ತೆ. ಜೊತೆಗೆ ಎಷ್ಟೋ ಗ್ರಾಮ ಪಂಚಾಯ್ತಿಗಳಿಗೆ ಸ್ವಂತ ಕಟ್ಟಡವೂ ಇಲ್ಲದಂತಹ ದುಸ್ಥಿತಿ ನಮ್ಮಲ್ಲಿದೆ. ಆದರೆ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಈ ರತ್ನಸಂದ್ರ ಗ್ರಾಮ ಪಂಚಾಯ್ತಿಯ ಈ ನೂತನ ಕಟ್ಟಡವನ್ನು ನೋಡಿದರೆ ಒಂದು ಕ್ಷಣ ವಾವ್ಹ್‌ ಅನ್ಬೇಕು ಹಂಗಿದೆ.

ಶಿರಾ ತಾಲೂಕಿನ ಕಸಬಾ ಹೋಬಳಿಯ ರತ್ನಸಂದ್ರ ಗ್ರಾಮ ಪಂಚಾಯ್ತಿಯ ನೂತನ ಕಟ್ಟಡ ಉದ್ಘಾಟನೆಗೆ ಸಜ್ಜಾಗಿ ನಿಂತಿದೆ. ಇದೇ ತಿಂಗಳು ೧೬ನೇ ತಾರೀಖು ಬುಧವಾರ ರತ್ನಸಂದ್ರ ಪಂಚಾಯ್ತಿಯ ನೂತನ ಕಚೇರಿ ಉದ್ಘಾಟನೆಗೊಳ್ಳಲಿದ್ದು, ಶಾಸಕ, ಮಾಜಿ ಸಚಿವ, ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ.

ಇನ್ನು ಗ್ರಾಮ ಪಂಚಾಯ್ತಿಯ ಈ ನೂತನ ಕಟ್ಟಡದೊಳಗೆ ಏನೇನಿದೆ ಅನ್ನೋದನ್ನು ಕೇಳಿದರೆ ನೀವೇ ಒಂದು ಕ್ಷಣ ಅಚ್ಚರಿಪಡ್ತೀರಾ. ಈ ಕಟ್ಟಡದಲ್ಲಿ ಡಿಜಿಟಲ್ ಗ್ರಂಥಾಲಯವಿದೆ. ಮಕ್ಕಳಿಗೆ ಓದಲು ಪುಸ್ತಕಗಳು, ಆಟವಾಡುವುದಕ್ಕೆ ಆಟಿಕೆಗಳು, ಹಿರಿಯ ನಾಗರಿಕರಿಗೆ ವಿಶ್ರಮಿಸಲು ಪ್ರತ್ಯೇಕ ಕೊಠಡಿ, ಒಂದೇ ಸೂರಿನಲ್ಲಿ ಕಂದಾಯ ಕಚೇರಿಗಳ ಮಾಹಿತಿ. ಒಂದೋ ಎರಡೋ ಹೀಗೆಯೇ ಹೇಳುತ್ತಾ ಹೋದರೆ ಸಾಲು ಸಾಲು ವಿಶೇಷತೆಗಳನ್ನು ಪಟ್ಟಿಮಾಡಬಹುದು.

ಇನ್ನು ಪುರುಷರಿಗೆ, ಮಹಿಳೆಯರಿಗೆ, ಅಂಗವಿಕಲರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆಗಳನ್ನು ಕೂಡ ಇಲ್ಲಿ ಮಾಡಲಾಗಿದೆ. ಸ್ತ್ರೀಶಕ್ತಿ ಸಂಘಗಳ ಸದಸ್ಯರಿಗೆ ಸಭೆಗಳನ್ನು ನಡೆಸುವುದಕ್ಕೆ ವಿಶಾಲವಾದ ಸಭಾಂಗಣವಿದ್ದು ಅಲ್ಲಿ ಬೇರೆ ಬೇರೆ ಕಾರ್ಯಕ್ರಮಗಳನ್ನು ಮಾಡೋದಕ್ಕೂ ಅವಕಾಶವಿದೆ. ಪಂಚಾಯ್ತಿ ಆವರಣದಲ್ಲಿರುವ ಹಸಿರು ಹೊದಿಕೆಯಂತೂ ಎಲ್ಲರ ಗಮನ ಸೆಳೆಯುತ್ತಿದೆ. ಇನ್ನು ಪಂಚಾಯ್ತಿಯ ವಿವಿಧ ಯೋಜನೆಗಳ ಮಾಹಿತಿ, ಕೈಗೊಂಡ ಕಾಮಗಾರಿಗಳ ವಿವರಗಳನ್ನು ಪ್ರದರ್ಶಿಸಲೆಂದೇ ಆ್ಯಂಡ್ರಾಯ್ಡ್ ಬೃಹತ್ ಟಿ.ವಿ ಪರದೆಯನ್ನೂ ಅಳವಡಿಸಲಾಗಿದೆ. ಇದರೊಂದಿಗೆ ನೋಟಿಸ್ ಫಲಕ, ಸಲಹಾ ಪೆಟ್ಟಿಗೆ, ಅಗ್ನಿನಂದಕ ಉಪಕರಣ, ಪ್ರಥಮ ಚಿಕಿತ್ಸೆ ಕಿಟ್‌ಗಳನ್ನು ಕೂಡ ಅಳವಡಿಸಲಾಗಿದೆ.

ಇನ್ನು ಬುಧವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ ಎಂದು ಪಿಡಿಒ ಜುಂಜೇಗೌಡ ಮಾಹಿತಿ ನೀಡಿದ್ದಾರೆ.

 

Author:

share
No Reviews