ಶ್ರೀ ಓಂಕಾರೇಶ್ವರಸ್ವಾಮಿ ಜಾತ್ರಾಮಹೋತ್ಸವತುಮಕೂರು
ತುಮಕೂರು :
ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿಯ ಶ್ರೀಗುರುಗುಂಡ ಬ್ರಹ್ಮೇಶ್ವರಸ್ವಾಮಿ ಮಠದಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಓಂಕಾರೇಶ್ವರಸ್ವಾಮಿ ಜಾತ್ರಾಮಹೋತ್ಸವ ಭಾನುವಾರ ಅದ್ಧೂರಿಯಾಗಿ ಜರುಗಿತು. ರಥೋತ್ಸವದ ಅಂಗವಾಗಿ 22 ನೇ ವರ್ಷದ ಕೃಷಿ ಮತ್ತು ಕೈಗಾರಿಕ ವಸ್ತು ಪ್ರದರ್ಶನಕ್ಕೆ ಶ್ರೀ ನಂಜಾವಧೂತ ಸ್ವಾಮಿ ಚಾಲನೆ ನೀಡಿದರು.
ಕೃಷಿ ಹಾಗೂ ಕೈಗಾರಿಕಾ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಶ್ರೀ ನಂಜಾವಧೂತ ಶ್ರೀಗಳು ಮಠ ಕೇವಲ ಧಾರ್ಮಿಕ ಆಚರಣೆಗಳಿಗೆ ಮಾತ್ರ ಸೀಮಿತವಾಗಿಲ್ಲ, ರೈತರ ಎಲ್ಲಾ ಕಷ್ಟ, ಸುಖದಲ್ಲಿ ಭಾಗಿಯಾಗಿದ್ದು, ಈ ಮಠವು ರೈತರ ಸಮಸ್ಯೆಗಳ ಪರವಾಗಿ ಕೆಲಸ ಮಾಡಲಿದೆ ಎಂದರು. ಜಾಗತೀಕರಣದ ಪರಿಣಾಮ ರೈತರ ಫಲವತ್ತಾದ ಕೃಷಿ ಭೂಮಿ ಕೈಗಾರಿಕೆಗಳ ನೆಪದಲ್ಲಿ ಭೂಪರಿವರ್ತನೆ ಯಾಗುತ್ತಿದ್ದು, ಜತೆಗೆ ಮಳೆಯ ಅಭಾವದಿಂದ ಅಂತರ್ಜಲ ಮಟ್ಟ ಕುಸಿತದಿಂದ ವ್ಯವಸಾಯ ಮಾಡುವ ಕೃಷಿಕರ ಸಂಖ್ಯೆ ಇಳಿಮುಖ ವಾಗುತ್ತಿದೆ ಎಂದರು .
ಉದ್ಯೋಗ ಹರಸಿ ರೈತರು ಹಳ್ಳಿಗಳನ್ನು ತೊರೆದು ನಗರಗಳಿಗೆ ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರು. ಇಂತಹ ಪರಿಸ್ಥಿತಿಯಲ್ಲಿ ರೈತರಿಗೆ ಆತ್ಮಸ್ತೆರ್ಯ ತುಂಬಿ, ಕಡಿಮೆ ನೀರಿನಲ್ಲಿ ಹೆಚ್ಚು ಆದಾಯ ಪಡೆಯುವಂತಹ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡು ಕಡಿಮೆ ನೀರಿನಲ್ಲಿ ಬೆಳೆ ಬೆಳೆಯಬಹುದು ಎಂಬ ಪ್ರತ್ಯಕ್ಷಿಕೆಯನ್ನು ವಸ್ತು ಪ್ರದರ್ಶನದಲ್ಲಿ ಪ್ರದರ್ಶಿಸಿ ರೈತರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕೆಂಬುದು ಶ್ರೀಮಠದ ಗುರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ, ಶಾಸಕ ಡಾ.ಟಿ.ಬಿ. ಜಯಚಂದ್ರ ಹಾಗೂ ಆಂಧ್ರಪ್ರದೇಶದ ಮಾಜಿ ಸಚಿವ ರಘುವೀರಾರೆಡ್ಡಿ ಸೇರಿದಂತೆ ಗ್ರಾಮಸ್ಥರು, ಹಾಗೂ ಮುಂತಾದವರು ಉಪಸ್ಥಿತರಿದ್ದರು.