ಶಿರಾ:
ಶಿರಾ ತಾಲ್ಲೂಕಿನ ತಾವರೆಕೆರೆ ಗ್ರಾಮದ ಡಾ.ಬಿ.ಆರ್ ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್‌ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಅಡುಗೆ ಮನೆಯ ದುಸ್ಥಿತಿ ಶೋಚನೀಯವಾಗಿದೆ. ನೋಡಲು ಸುಂದರ ಕಟ್ಟಡ ಇದ್ದರೂ ಒಳಗೆ ಅವ್ಯವಸ್ಥೆಯ ಆಗರವಾಗಿದೆ, ಅಡುಗೆ ಕೋಣೆಯ ಅಕ್ಕಿಯಲ್ಲಿ ಹುಳುಗಳ ರಾಶಿ. ತರಕಾರಿಯೂ ಸಹ ಇಲ್ಲ, ಹಾಗೂ ನಲ್ಲಿಯಲ್ಲಿ ನೀರು ಸೊರುತ್ತಿದೆ. ಹರಿದ ಹಾಸಿಗೆ ಮೇಲೆ ಮಕ್ಕಳ ಕೈಯಲ್ಲಿ ಮೊಬೈಲ್ದೇ ಕಾರುಬಾರು. ಇಲ್ಲಿನ ಮೇಲ್ವಿಚಾರಕರು ಯಾವ ರೀತಿ ಮಕ್ಕಳ ಪಾಲನೆ ಮಾಡುತ್ತಿದ್ದಾರೆ ಎಂಬುದೇ ಪ್ರಶ್ನೆ.
ಈ ವಸತಿ ಶಾಲೆಯ ಬಗ್ಗೆ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ನಮ್ಮ ಪ್ರಜಾಶಕ್ತಿ ಟಿವಿ ರಿಯಾಲಿಟಿ ಚೆಕ್ ಗಾಗಿ ಹಾಸ್ಟೆಲ್‌ಗೆ ದಿಢೀರ್ ಭೇಟಿ ನೀಡಿದ ಸಂದರ್ಭದಲ್ಲಿ ಇವೆಲ್ಲ ವಿಷಯಗಳು ತಿಳಿದುಬಂದಿದೆ. ವಸತಿ ಶಾಲೆಗೆ ಹೋದಾಗ ಶಾಲೆಗೆ ಬೀಗ ಹಾಕಿದ್ದು. ವಸತಿ ನಿಲಯದಲ್ಲಿ ಕಾವಲುಗಾರ ಸೇರಿದಂತೆ ಅಡುಗೆ ಸಿಬ್ಬಂದಿ ಹಾಗೂ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ಸಹ ಅಲ್ಲಿ ಇರಲಿಲ್ಲ. ಮಂಗಳವಾರ ಇಲ್ಲಿನ ತಾವರೆಕೆರೆ ಬಂಡಿ ರಂಗನಾಥ ಸ್ವಾಮಿ ರಥೋತ್ಸವ ಇದ್ದ ಕಾರಣ, ಬುಧವಾರದಂದು ವಿದ್ಯಾರ್ಥಿ ನಿಲಯ ತೆರೆದೇ ಇರಲಿಲ್ಲ. ಇನ್ನು ಇಲ್ಲಿನ ಯುವಕ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕರಿಗೆ ಕರೆಮಾಡಿದರೆ ಸರ್ ನನ್ನ ಆರೋಗ್ಯ ಸರಿ ಇಲ್ಲ ಎಂದು ಹೇಳಿದರು. ನಂತರ ಬಂದ ಮೇಲ್ವಿಚಾರಕ ಸರ್ ಆರೋಗ್ಯ ಸರಿ ಇಲ್ಲದರಿಂದ ಆಸ್ಪತ್ರೆಗೆ ಹೋಗಿದ್ದೆ ಎಂಬ ಉತ್ತರವನ್ನು ನೀಡಿದರು.
ಇನ್ನು ವಸತಿ ನಿಲಯದ ಅಡುಗೆ ಕೋಣೆಯಲ್ಲಿ ಮಕ್ಕಳಿಗಾಗಿ ಬೆಳಗಿನ ತಿಂಡಿಯೂ ಸಹ ಮಾಡಿರಲಿಲ್ಲ , ಈ ಬಗ್ಗೆ ಅಡುಗೆ ಸಿಬ್ಬಂದಿಯನ್ನು ಕೇಳಿದರೆ ಅವರು ಟಮೋಟೋ ಬಾತ್ ಮಾಡಿದ್ದೆ ಎಂದು ಹೇಳುತ್ತಾರೆ. ಆದರೆ ವಿದ್ಯಾರ್ಥಿ ನಿಲಯದ ಮೆನು ಪ್ರಕಾರ ಇಡ್ಲಿ ಸಾಂಬಾರ್ ಇರಬೇಕಿತ್ತು. ಹಾಗೇನಾದರೂ ತಿಂಡಿ ಮಾಡಿದ್ದರೆ ಸ್ವಲ್ವನಾದ್ರೂ ಉಳಿಯಬೇಕು? ಅಲ್ಲವೇ ಆಥವಾ ಮಕ್ಕಳಿಗೆ ಅರ್ಧ ಊಟದ ವ್ಯವಸ್ಥೆ ಇರಬೇಕು ಎಂಬ ಅನುಮಾನ ಎದ್ದು ಕಾಡುತ್ತಿದೆ.
ವಸತಿ ನಿಲಯದ ವಿದ್ಯಾರ್ಥಿ ಮಾತನಾಡಿ ಬಡತನ, ಅಪಮಾನಗಳ ಚಕ್ರದಿಂದ ಬಿಡುಗಡೆ ಪಡೆದು, ಭವಿಷ್ಯದ ಕನಸುಗಳನ್ನು ಹೊತ್ತು ಹಾಸ್ಟೆಲ್‌ಗಳಿಗೆ ಬರುತ್ತೇವೆ. ಊಟ ಮಾಡಲು ಕನಿಷ್ಠ ಗುಣಮಟ್ಟದ ಅನ್ನ, ಕುಡಿಯಲು ಶುದ್ಧ ನೀರು, ಓದಿಗೆ ಪೂರಕವಾದ ವಾತಾವರಣ ಇರಲಿ ಎಂದು ವಸತಿ ನಿಲಯಕ್ಕೆ ವಿದ್ಯಾರ್ಥಿಗಳು ಸೇರಿದ್ದಾರೆ, ಆದರೆ ಮೆನು ಪ್ರಕಾರ ಉಪಾಹಾರ, ಊಟ, ಶುಚಿ ಕಿಟ್ ಕೊಡುವಂತೆ ಧ್ವನಿ ಎತ್ತುವ ಹಾಗಿಲ್ಲ ಕೇಳಿದರೆ ಮಾನಸಿಕವಾಗಿ ಕಿರುಕುಳ ನೀಡುತ್ತಾರೆ ಎಂದನು.
ಶೈಕ್ಷಣಿಕ ಬದುಕಿನ ಕನಸಿನ ಮೂಟೆಗಳನ್ನು ಹೊತ್ತು ಬಡ, ಮಧ್ಯಮದ ವರ್ಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಸ್ಟೆಲ್‌ಗಳಲ್ಲಿ ದಾಖಲಾಗುತ್ತಿದ್ದಾರೆ. ಆದರೆ, ಅಲ್ಲಿನ ಮೂಲಸೌಕರ್ಯಗಳ ಕೊರತೆ ಹಾಗೂ ಕೆಲವು ಸಿಬ್ಬಂದಿಯ ಕಿರುಕುಳ ಅವರಲ್ಲಿನ ಕಲಿಕಾ ಗುಣಮಟ್ಟವನ್ನು ಕುಸಿಯುವಂತೆ ಮಾಡುತ್ತಿದೆ. ಹೀಗೆ ಸಾಲು–ಸಾಲು ಸಮಸ್ಯೆಗಳು ಸರ್ಕಾರದ ಅರಿವಿಗೆ ಬಂದರೂ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.