KUNIGAL: ನವಜಾತ ಶಿಶು ಮಾರಾಟ...ಐವರ ಬಂಧನ

ಕುಣಿಗಲ್: 

ಮಹಿಳಾ ಮತ್ತು ಮಕ್ಕಳ ಇಲಾಖೆವತಿಯಿಂದ ಮಗು ದತ್ತು ಸ್ವೀಕರಾದ ಬಗ್ಗೆ, ಮಕ್ಕಳ ಮಾರಾಟದ ಬಗ್ಗೆ ಅದೆಷ್ಟೋ ಜಾಗೃತಿ ಮೂಡಿಸುವ ಕೆಲಸ ಮಾಡಿದ್ರು, ತೆರೆಮರೆಯಲ್ಲಿ ನವಜಾತ ಶಿಶುಗಳನ್ನು ಮಾರಾಟ ಮಾಡುವ ಪ್ರಕರಣಗಳು ನಡೆಯುತ್ತಲೇ ಇದೆ. ಈಗ ಇಂತಹದ್ದೇ ಪ್ರಕರಣ ಗೃಹ ಸಚಿವರ ತವರು ಕ್ಷೇತ್ರದ ತುಮಕೂರು ಜಿಲ್ಲೆ ಕುಣಿಗಲ್‌ ತಾಲೂಕಿನಲ್ಲಿ ನವಜಾತ ಶಿಶು ಮಾರಾಟ ಜಾಲ ಪತ್ತೆಯಾಗಿದ್ದು, ಶಿಶು ಮಾರಾಟ ಪ್ರಕರಣದಲ್ಲಿ ಭಾಗಿಯಾಗಿರೋ ಅಂಗನವಾಡಿ ಕಾರ್ಯಕರ್ತೆ ಜ್ಯೋತಿ ಎಂಬುವವರು ಸೇರಿ ಐದು ಮಂದಿಯನ್ನು ಬಂಧಿಸಲಾಗಿದೆ. ಹೌದು ಮಗು ಹುಟ್ಟಿದ ಎರಡೇ ದಿನಕ್ಕೆ ಗಂಡು ಮಗುವನ್ನು 60 ಸಾವಿರಕ್ಕೆ ಮಾರಾಟ ಮಾಡಿದ್ದು, ಮಗು ಮಾರಾಟ ಮಾಡಿದ ಎರಡೇ ದಿನದಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ..

ಮೂಲತಃ ರಾಮನಗರ ಜಿಲ್ಲೆಯ ಮಾಗಡಿಯ ಮನಿಷಾ ಎಂಬ ಅವಿವಾಹಿತ ಯುವತಿ ಫೆಬ್ರವರಿ 20ರಂದು ಕುಣಿಗಲ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಳು.. ಆದ್ರೆ ಮಗುವನ್ನು ಕರೆದೊಯ್ಯಲು ಅವಿವಾಹಿತ ಯುವತಿ ಒಪ್ಪಿರಲಿಲ್ಲ.. ಆಸ್ಪತ್ರೆಯಲ್ಲೇ ಎರಡು ದಿನ ಇದ್ದ ಅವಿವಾಹಿತ ಯುವತಿಗೆ ಕೊತ್ತಗೆರೆಯ ಅಂಗನವಾಡಿ ಕಾರ್ಯಕರ್ತೆ ಜ್ಯೋತಿ ಎಂಬುವವರು ಪರಿಚಯ ಆಗಿದ್ದು, ಅವರ ಮೂಲಕ ಮಗುವನ್ನು ಯುವತಿ ಮಾರಾಟ ಮಾಡಿದ್ದಾಳೆ.. ಕುಣಿಗಲ್‌ ತಾಲೂಕಿನ ಮುಬಾರಕ್‌ ಪಾಷಾ ಎಂಬ ದಂಪತಿಗೆ ಸುಮಾರು 60 ಸಾವಿರಕ್ಕೆ ಫೆಬ್ರವರಿ 22 ರಂದು ಮಗುವನ್ನು ಮಾರಾಟ ಮಾಡಲಾಗಿದೆ. ಮಗು ಮಾರಾಟದ ಬಳಿಕ ಯುವತಿ ಮಾಗಡಿಗೆ ತೆರಳಿದ್ದು ತನಗೆ ಡೆಲವರಿ ಆದ ವಿಚಾರವನ್ನು ತನ್ನ ಪೋಷಕರಿಗೆ  ತಿಳಿಸಿದ್ದಾಳೆ.  ಮಗು ವಾಪಸ್‌ ಪಡೆಯಲು ಅವಿವಾಹಿತೆಯ ಪಾಲಕರು ಪೊಲೀಸ್ ಠಾಣೆ ಮೆಟ್ಟಿಲೇರಿದಾಗ ಮಗು ಮಾರಾಟದ ಪ್ರಕರಣ ಬೆಳಕಿಗೆ ಬಂದಿದೆ.

ಇನ್ನು ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮೇಲ್ವಿಚಾರಕಿ ಹುಚ್ಚರಂಗಮ್ಮ ನೀಡಿದ ದೂರಿನ ಅನ್ವಯ ಕುಣಿಗಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಿನ್ನೆ ನವಜಾತ ಶಿಶುವನ್ನು ಮಾರಾಟ ಮಾಡಿದ ಅವಿವಾಹಿತೆ, ಪ್ರಿಯಕರ ಶ್ರೀನಂದ, ಮಗು ಮಾರಾಟಕ್ಕೆ ಸಹಕರಿಸಿದ ಅಂಗನವಾಡಿ ಕಾರ್ಯಕರ್ತೆ ಜ್ಯೋತಿ ಹಾಗೂ ಮಗುವನ್ನು ಪಡೆದ ಮುಬಾರಕ್ ಪಾಷಾ ಸೇರಿ ಒಟ್ಟು ಐವರನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸಲಾಗಿದೆ. ಇವರ ವಿರುದ್ಧ ಕುಣಿಗಲ್‌ ಪೊಲೀಸ್‌ ಠಾಣೆಯಲ್ಲಿ FIR ದಾಖಲಾಗಿದೆ. ಅಲ್ದೇ ಮಗುವನ್ನು ರಕ್ಷಣೆ ಮಾಡಿ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಇಡಲಾಗಿದೆ.

ದತ್ತು ಮಗು ಪಡೆಯುವ ಬಗ್ಗೆ ಹಾಗೂ ಮಗು ಮಾರಾಟದ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಜಾಗೃತಿ ಮೂಡಿಸುತ್ತಲೇ ಬರ್ತಿದ್ರು ಕೂಡ ಜನರು ಮಾತ್ರ ಎಚ್ಚೆತ್ತುಕೊಳ್ತಿಲ್ಲ ಅಂತಾ ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪ ನಿರ್ದೇಶಕರಾದ ಚೇತನ್‌ ಕುಮಾರ್‌ ಬೇಸರ ವ್ಯಕ್ತಪಡಿಸಿದ್ರು.

Author:

share
No Reviews