ಚಿಕ್ಕಬಳ್ಳಾಪುರ : ಡಿ ಮಾರ್ಟ್‌ ನಿಂದ ಎಕ್ಸ್ ಪೈರಿ ಡೇಟ್ ಮುಗಿಯೋಕೆ ಬಂದ ಪದಾರ್ಥಗಳ ಮಾರಾಟ

ಚಿಕ್ಕಬಳ್ಳಾಪುರ :

ಡಿ ಮಾರ್ಟ್‌ ಕಡಿಮೆ ಅವಧಿಯಲ್ಲಿ ಫುಲ್‌ ಫೇಮಸ್‌ ಆಗಿದೆ. ಕೈಗೆಟುಕುವ ದರದಲ್ಲಿ ಸಾಮಾಗ್ರಿಗಳನ್ನು ಗ್ರಾಹಕರು ಬ್ಯಾಗ್‌ ತುಂಬಾ ತಗೊಂಡು ಹೋಗ್ತಾ ಇದ್ದರು. ಆದರೆ ಆ ಮಾರ್ಟ್‌ನಲ್ಲಿ ಕಳಪೆ ಗುಣಮಟ್ಟದ ಆಹಾರ ಮಾರಾಟ ಮಾಡಿದ್ದು ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೇ ಇದನ್ನು ಕೇಳಲು ಗ್ರಾಹಕರು ಹೋದರೆ ಡಿ ಮಾರ್ಟ್‌ ಸಿಬ್ಬಂದಿ ದಬ್ಬಾಳಿಕೆ ಮಾಡಿದ್ದಾರೆ. ಚಿಕ್ಕಬಳ್ಳಾಪುರ ನಗರದಲ್ಲಿ ಈ ಘಟನೆ ನಡೆದಿದೆ. 

ಚಿಕ್ಕಬಳ್ಳಾಪುರ ನಗರದಲ್ಲಿ ಮೂರು ದಿನಗಳ ಹಿಂದೆಯಷ್ಟೇ ನೂತನವಾಗಿ ಡಿ ಮಾರ್ಟ್‌ ತೆರೆಯಲಾಗಿದ್ದು, ನೂತನ ಅಂಗಡಿಯಲ್ಲಿ ಖರೀದಿಗೆ ಚಿಕ್ಕಬಳ್ಳಾಪುರ ಜನರು ಮುಗಿಬಿದ್ದಿದ್ದರು. ಬಾಗೇಪಲ್ಲಿ ಮೂಲದ ಇರ್ಫಾನ್‌ ಎಂಬುವವರು ನೂತನ ಡಿ ಮಾರ್ಟ್‌ನಲ್ಲಿ ಡ್ರೈ ಫ್ರೂಟ್‌ ಸೇರಿ ದಿನಸಿ ಪದಾರ್ಥಗಳನ್ನು ಪರ್ಚೇಸ್‌ ಮಾಡಿಕೊಂಡು ಮನೆಗೆ ಹೋಗಿದ್ದಾರೆ. ಮಕ್ಕಳಿಗೆ ಅಂಜೂರ ತಿನ್ನಿಸಲು ಹೋಗಿದ್ದಾರೆ. ಆದರೆ ಅವರು ಖರೀದಿಸಿದ್ದ ಅಂಜೂರದಲ್ಲಿ ವಿಲ ವಿಲ ಅಂತಾ ಒದ್ದಾಡ್ತಾ ಇರೋ ಹುಳಗಳು ಕಂಡು ಬಂದಿದೆ. ಇದರಿಂದ ಭಯಗೊಂಡ ಇರ್ಫಾನ್‌ ಮರುದಿನ ಡಿ ಮಾರ್ಟ್‌ ಬಳಿ ಬಂದು ಸಿಬ್ಬಂದಿ ಬಳಿ ಮಾತನಾಡಿ ಬಿಲ್‌ ಪಡೆದು ಮತ್ತೊಂದು ಅಂಜೂರ ಪ್ಯಾಕೇಟ್‌ ಪಡೆದಿದ್ದಾರೆ. ಆದರೆ ಆ ಅಂಜೂರ ಪಾಕೇಟ್‌ನಲ್ಲೂ ಹುಳಗಳು ಪತ್ತೆಯಾಗಿದೆ. ಇದರಿಂದ ಆಕ್ರೋಶಗೊಂಡ ಗ್ರಾಹಕ ಇರ್ಫಾನ್‌ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಡಿ ಮಾರ್ಟ್ ಸಿಬ್ಬಂದಿ ಮಾತ್ರ ಗ್ರಾಹಕರ ವಿರುದ್ದವೇ ದಬ್ಬಾಳಿಕೆಯ ಮಾತುಗಳನ್ನಾಡಿದ್ದಾರೆ.  

ಡಿ ಮಾರ್ಟ್‌ನಲ್ಲಿ ಎಕ್ಸ್ ಪೈರಿ ದಿನಾಂಕ ಹತ್ತಿರ ಇರೋ ಪದಾರ್ಥಗಳನ್ನು ಗ್ರಾಹಕರಿಗೆ ಮಾರಾಟ ಮಾಡ್ತಾ ಇದ್ದಾರೆ ಎಂದು ಗ್ರಾಹಕ ಇರ್ಫಾನ್‌ ಗಂಭೀರ ಆರೋಪ ಮಾಡ್ತಾ ಇದ್ದಾರೆ. ಗುಣಮಟ್ಟ ಪದಾರ್ಥಗಳಿಂದ ಜನರಿಗೆ ಅನಾಹುತ ಆದರೆ ಯಾರು ಹೊಣೆ ಎಂದು ಆಕ್ರೋಶ ಹೊರಹಾಕ್ತಿದ್ದಾರೆ.

ಇನ್ನೂ ಯಾವಾಗ ಅಂಜೂರದಲ್ಲಿ ಹುಳುಗಳು ಪತ್ತೆಯಾಗಿದೆ ಎಂದು ಸಾರ್ವಜನಿಕರು ಡಿ ಮಾರ್ಟ್‌ ಬಳಿ ಆಕ್ರೋಶ ವ್ಯಕ್ತಪಡಿಸ್ತಾ ಇದ್ದಂತೆ ಸ್ಥಳಕ್ಕೆ ಮಾಧ್ಯಮದವರು ಹೋಗಿ ಸುದ್ದಿ ಮಾಡಲು ಹೋದರೆ ಮಾಧ್ಯಮದವರ ಮೇಲೆ ಡಿ ಮಾರ್ಟ್‌ ಸಿಬ್ಬಂದಿ ಗೂಂಡಾವರ್ತನೆ ಮಾಡಿದ್ದಾರೆ. ಅದಲ್ಲದೇ ಕಳಪೆ ಆಹಾರ ಮತ್ತು ಹುಳುಗಳು ಇರುವ ಪದಾರ್ಥಗಳನ್ನು ಕೇಳಲು ಹೋದ ಸಾರ್ವಜನಿಕರ ಮೇಲೆಯೂ ಡಿ ಮಾರ್ಟ್ ಸಿಬ್ಬಂದಿ ಏಯ್. ಯಾಕೆ ವೀಡಿಯೋ ಮಾಡ್ತಿಯಾ ನಿಲ್ಲಿಸು... ವೀಡಿಯೋ ಮಾಡ್ಕೊಂಡ್ರೆ ಏನ್ ಮಾಡ್ತಿಯಾ.. ಮಾಡ್ಕೊ ಹೋಗು ಎನ್ನುವ ಮಾತುಗಳನ್ನಾಡಿ ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಯಾವಾಗ ಈ ವಿಚಾರ ದೊಡ್ಡದಾಯ್ತು ಡಿ ಮಾರ್ಟ್ ಸಿಬ್ಬಂದಿ ಪೋಲಿಸ್ ಸಿಬ್ಬಂದಿಯನ್ನು ಕರೆಸಿದ್ದಾರೆ. ನಂತರ ಆಹಾರ ಸುರಕ್ಷಿತಾ ಪ್ರಾಧಿಕಾರದ ಅಧಿಕಾರಿಗಳು ಬಂದರು. ಆದರೆ ಇವರ ಮುಂದೆಯೇ ವೀಡಿಯೋ ಚಿತ್ರೀಕರಣ ಮಾಡಲು ಹೋದ ಮಾಧ್ಯಮದವರ ಮೇಲೆಯೇ ಡಿ ಮಾರ್ಟ್ ಸಿಬ್ಬಂದಿ ಚಿತ್ರೀಕರಣ ನಿಲ್ಲಿಸುವಂತೆ ದರ್ಪ ತೋರಿದ್ದಾರೆ.‌ ಕಳಪೆ ಮತ್ತು ಅಂಜೂರದಲ್ಲಿ ಹುಳುಗಳ ಕಂಡು ಬಂದ ವಿಚಾರವಾಗಿ ಡಿ ಮಾರ್ಟ್ ಸಿಬ್ಬಂದಿಗೆ ಸ್ಪಷ್ಟೀಕರಣ ಕೊಡುವಂತೆ ಕೇಳಿದರೆ ನಿರಾಕರಿಸಿದ್ದಾರೆ.

Author:

...
Editor

ManyaSoft Admin

share
No Reviews