ಗುಬ್ಬಿ : ಸುಳ್ಳನ್ನು ನೂರು ಬಾರಿ ಹೇಳಿ ಸತ್ಯವನ್ನಾಗಿಸುವ ಪ್ರವೃತ್ತಿಯನ್ನು ಬಿಜೆಪಿ ನಾಯಕರಿಗೆ ಆರ್‌ಎಸ್‌ಎಸ್ ಹೇಳಿ ಕೊಡಲಿದೆ ಎಂದು ಶಾಸಕ ಎಸ್.ಆರ್ ಶ್ರೀನಿವಾಸ್ ಆಕ್ರೋಶ ಹೊರಹಾಕಿದ್ದಾರೆ. ಗುಬ್ಬಿ ತಾಲೂಕಿನ ಕಡಬ ಹೋಬಳಿಯ ಇಸ್ಲಾಂಪುರ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಕಡಬ - ಕೆ.ಜಿ ಟೆಂಪಲ್ ರಸ್ತೆ ಅಭಿವೃದ್ಧಿಯ ಕಾಮಗಾರಿಗೆ ಶಾಸಕ ಎಸ್.ಆರ್ ಶ್ರೀನಿವಾಸ್ ಗುದ್ದಲಿ ಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಶಾಸಕರು, ಹೇಮಾವತಿ ಎಕ್ಸ್ ಪ್ರೆಸ್ ಕಾಮಗಾರಿ ಬಗ್ಗೆ ನನ್ನದು ವಿರೋಧವಿದೆ. ಇವತ್ತೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡುತ್ತಿದ್ದೇನೆ. ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕಾದ ನಾನು ನನ್ನ ನೋವುಗಳನ್ನು ಅಲ್ಲಿಯೇ ಹೇಳಿಕೊಳ್ಳುತ್ತೇನೆ ಎಂದರು. ಲಿಂಕ್ ಕೆನಾಲ್‌ನಿಂದ ಕಾಂಗ್ರೆಸ್ ಕಿಕ್ ಬ್ಯಾಕ್ ಮಾಡ್ತಿದೆ ಎಂಬ ಆರೋಪವನ್ನು ನಾನು ಒಪ್ಪಲ್ಲ. ಬಿಜೆಪಿ ಸುಖಾಸುಮ್ಮನೆ ಸುಳ್ಳು ಹೇಳುತ್ತಿದೆ ಎಂದು ಕಿಡಿಕಾರಿದರು.
ಇನ್ನು ಗೃಹ ಸಚಿವ ಪರಮೇಶ್ವರ್ ಅವರು 40 ವರ್ಷದ ರಾಜಕೀಯದಿಂದ ಬೆಳೆದ ದಲಿತ ನಾಯಕರು. ಅವರ ಬೆಳವಣಿಗೆ ಸಹಿಸದ ಬಿಜೆಪಿ ಇಡಿ ದಾಳಿ ಮಾಡಿಸಿದೆ. ಇದನ್ನು ತಿರುಚಿ ಡಿ.ಕೆ. ಶಿವಕುಮಾರ್ ಮಾಡಿಸಿದ್ದು ಎಂದು ಹೇಳುವ ಕುಮಾರಸ್ವಾಮಿ ಅವರು ಕೂಡ ಇಡಿ ಪಾಲುದಾರರು, ಬಿಜೆಪಿ ಜೊತೆ ಸೇರಿ ಪ್ಲೇಟ್ ಬದಲಿಸುತ್ತಾರೆ. ಬಿಜೆಪಿಯ ಯಾವ ನಾಯಕರ ಮನೆಗೂ ಇಡಿ ದಾಳಿ ಮಾಡಿಲ್ಲ. ಅವರೆಲ್ಲಾ ಆಶ್ರಯ ಮನೆಯಲ್ಲಿ ವಾಸವಾಗಿದ್ದಾರೆಯೇ, ಅವರದ್ದು ವಿದ್ಯಾ ಸಂಸ್ಥೆ ಇಲ್ಲವೇ, ಈ ಬಗ್ಗೆ ಸುಪ್ರೀಂ ಕೋರ್ಟ್ ಸಹ ಬಿಜೆಪಿಗೆ ಛೀಮಾರಿ ಹಾಕಿದೆ ಎಂದು ಶಾಸಕ ಎಸ್.ಆರ್ ಶ್ರೀನಿವಾಸ್ ಕಿಡಿಕಾರಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ ಲಕ್ಷ್ಮೀನಾರಾಯಣ, ಲಿಂಗಮ್ಮನಹಳ್ಳಿ ರಾಜಣ್ಣ, ಎಸ್.ಎಲ್.ನರಸಿಂಹಯ್ಯ, ಪಟೇಲ್ ದೇವರಾಜ್, ಶಂಕರಾನಂದ, ರೆಹಮತ್ ವುಲ್ಲಾ ಸೇರಿ ಹಲವರು ಭಾಗಿಯಾಗಿದ್ದರು.