ದೇಶ : ಚೆನ್ನೈನ ಖ್ಯಾತ ಪರಮಾಣು ವಿಜ್ಞಾನಿ ಮತ್ತು ಪರಮಾಣು ಶಕ್ತಿ ಆಯೋಗದ ಮಾಜಿ ಅಧ್ಯಕ್ಷರಾಗಿದ್ದ ಎಂ.ಆರ್.ಶ್ರೀನಿವಾಸನ್ ಇಂದು ನಿಧನರಾಗಿದ್ದಾರೆ. ಎಂ.ಆರ್.ಶ್ರೀನಿವಾಸನ್ ಅವರಿಗೆ 95 ವರ್ಷ ವಯಸ್ಸಾಗಿತ್ತು. ಅವರು ತಮಿಳುನಾಡಿನ ಉದಕಮಂಡಲದಲ್ಲಿ ಅಂತಿಮ ದಿನಗಳನ್ನು ಕಳೆಯುತ್ತಿದ್ದರು.
ಪರಮಾಣು ಪಿತಾಮಹ ಹೋಮಿ ಭಾಭಾ ಅವರ ಜೊತೆಗೆ ಭಾರತದ ಮೊದಲ ಪರಮಾಣ ಸಂಶೋಧನಾ ರಿಯಾಕ್ಟರ್ನ ನಿರ್ಮಾಣದಲ್ಲಿ ಶ್ರೀನಿವಾಸನ್ ಕಾರ್ಯ ನಿರ್ವಹಿಸಿದ್ದರು. 1955ರಲ್ಲಿ ಪರಮಾಣು ಇಂಧನ ಇಲಾಖೆ ಸೇರಿದ ಅವರು ಐದು ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ಅನೇಕ ಪರಮಾಣು ಇಂಧನ ಯೋಜನೆಗಳಲ್ಲಿ ಪ್ರಮುಖರಾಗಿ ಕಾರ್ಯನಿರ್ವಹಿಸಿದ್ದರು. 1959ರಲ್ಲಿ ದೇಶದ ಮೊದಲ ಪರಮಾಣು ವಿದ್ಯುತ್ ಸ್ಥಾವರಕ್ಕೆ ಪ್ರಧಾನ ಯೋಜನಾ ಎಂಜಿನಿಯರ್ ನೇಮಿಕವಾಗಿದ್ದರು. 1967 ರಲ್ಲಿ ಮದ್ರಾಸ್ ಪರಮಾಣು ವಿದ್ಯುತ್ ಸ್ಥಾವರದ ಮುಖ್ಯ ಯೋಜನಾ ಎಂಜಿನಿಯರ್ ರಾಗಿ ಕೂಡ ಕಾರ್ಯನಿರ್ಹಿಸಿದ್ದಾರೆ.
ಇನ್ನು ಡಾ.ಶ್ರೀನಿವಾಸನ್ ರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದರು. 1974ರಲ್ಲಿ ಶ್ರೀನಿವಾಸನ್ ಅವರು ಡಿಎಇಯ ವಿದ್ಯುತ್ ಯೋಜನೆಗಳ ಎಂಜಿನಿಯರಿಂಗ್ ವಿಭಾಗದ ನಿರ್ದೇಶಕರಾಗಿದ್ದರು. 1984ರಲ್ಲಿ ಪರಮಾಣು ವಿದ್ಯುತ್ ಮಂಡಳಿಯ ಅಧ್ಯಕ್ಷರಾಗಿದ್ದರು. ಈ ಅವಧಿಯಲ್ಲಿ ದೇಶದಾದ್ಯಂತ ಎಲ್ಲಾ ಪರಮಾಣು ವಿದ್ಯುತ್ ಯೋಜನೆಗಳ ಯೋಜನೆ, ಕಾರ್ಯಗತಗೊಳಿಸುವಿಕೆ ಮತ್ತು ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದ್ದರು.
ಇವರನ್ನು 1987ರಲ್ಲಿ ಶ್ರೀನಿವಾಸನ್ ಅವರನ್ನು ಪರಮಾಣು ಶಕ್ತಿ ಆಯೋಗದ ಅಧ್ಯಕ್ಷರಾಗಿ ಮತ್ತು ಪರಮಾಣು ಶಕ್ತಿ ಇಲಾಖೆಯ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು. ಇದೇ ವರ್ಷ ಅವರು ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (NPCIL) ಅಧ್ಯಕ್ಷರಾಗಿದ್ದರು. ಶ್ರೀನಿವಾಸನ್ ನಾಯಕತ್ವದಡಿ ದೇಶದಾದ್ಯಂತ 18 ಪರಮಾಣು ವಿದ್ಯುತ್ ಘಟಕಗಳನ್ನು ಅಭಿವೃದ್ಧಿಪಡಿಸಲಾಗಿತ್ತು. ಭಾರತದ ಪರಮಾಣು ವಿದ್ಯುತ್ ಅಭಿವೃದ್ದಿಗೆ ನೀಡಿದ ಕೊಡುಗೆಗೆ ಭಾರತದ ಅತ್ಯುನ್ನತ ನಾಗರೀಕ ಗೌರವ ಪುರಸ್ಕಾರವಾದ ಪದ್ಮಭೂಷಣ ನೀಡಿ ಗೌರವಿಸಲಾಗಿದೆ.