SIRA NEWS : ತೀವ್ರ ಕುತೂಹಲ ಮೂಡಿಸಿದ್ದ ಐಪಿಎಲ್ 2025 ಟಿ–20 ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯವನ್ನು ಶಿರಾ ನಗರ ಹಾಗೂ ತಾಲ್ಲೂಕಿನಲ್ಲಿ ಜನರು ವಿಶೇಷ ಉತ್ಸಾಹದಿಂದ ವೀಕ್ಷಿಸಿದರು. ನಗರದ ಮಧುಗಿರಿ ರಸ್ತೆ, ವಿವೇಕಾನಂದ ಕ್ರೀಡಾಂಗಣ ಸೇರಿದಂತೆ ಹಲವೆಡೆ ದೊಡ್ಡ ಪರದೆ (Big Screen) ವ್ಯವಸ್ಥೆ ಮಾಡಲಾಗಿದ್ದು, ನೂರಾರು ಮಂದಿ ಅದರಲ್ಲಿ ಭಾಗವಹಿಸಿದರು.
ಐಪಿಎಲ್‌ನ 18ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಪಂಜಾಬ್ ಕಿಂಗ್ಸ್ (PBKS) ತಂಡಗಳು ತೀವ್ರ ಹಣಾಹಣಿಯಲ್ಲಿ ಮುಖಾಮುಖಿಯಾಗಿದ್ದವು. RCB ತನ್ನ ಐತಿಹಾಸಿಕ ಗೆಲುವು ದಾಖಲಿಸಿದ ಈ ಪಂದ್ಯವನ್ನು ವೀಕ್ಷಿಸಲು ತಾಲ್ಲೂಕಿನ ಜನತೆ ಟಿ.ವಿ. ಮುಂದೆ ಅಥವಾ ಬೃಹತ್ ಪರದೆಗಳ ಮುಂದೆ ಗುಂಪು ಗುಂಪಾಗಿ ಸೇರಿದರು.
ನಗರದ ಹಲವಾರು ರಾಜಕೀಯ ಪಕ್ಷಗಳ ಮುಖಂಡರು ಈ ಕಾರ್ಯಕ್ರಮಗಳಿಗೆ ಬೆಂಬಲ ನೀಡಿದ್ದು, ವಿವಿಧ ಮೈದಾನಗಳಲ್ಲಿ ಪರದೆ ಹಾಕಿಸಿ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕಲ್ಪಿಸಿದ್ದರು. ತಾಲ್ಲೂಕಿನ ಹಲವು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅಭಿಮಾನಿಗಳು, ಆರ್ಸಿಬಿ ಗೆಲುವಿಗಾಗಿ ಪ್ರಾರ್ಥಿಸಿದರು. ಇನ್ನು ಪ್ರತಿಯೊಬ್ಬರು ಆರ್ಸಿಬಿ ಪರ ಜೈಕಾರ ಹಾಕಿದರು.
ಇನ್ನು ಮಕ್ಕಳು, ವೃದ್ಧರು, ಮಹಿಳೆಯರು, ಯುವಕ–ಯುವತಿಯರೂ ಹೆಚ್ಚು ಆಸಕ್ತಿಯಿಂದ ಪಂದ್ಯ ವೀಕ್ಷಿಸಿದರು. ಪಂದ್ಯದ ಪ್ರತಿ ಬಾಲ್ ಸಂದರ್ಭವನ್ನೂ ಕುತೂಹಲದಿಂದ ವೀಕ್ಷಿಸಿದರು. ಇನ್ನು RCB ಗೆಲುವಾದ ನಂತರ ಜನರು ಜೈಘೋಷ, ಪಟಾಕಿ, ಹಾಗೂ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.