ರಾಮನಗರ : ಕಳೆದ ಎರಡು ಮೂರು ದಿನಗಳ ಹಿಂದೆ ರಾಮನಗರದ ಬಿಡದಿಯಲ್ಲಿ ಕಿವುಡು-ಮೂಕ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ನಡೆದಿದ್ದು, ಮಗಳನ್ನು ಕಳೆದುಕೊಂಡ ಕುಟುಂಬ ಕಣ್ಣೀರಲ್ಲಿ ಕೈತೊಳೆಯುತ್ತಿದೆ.
ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಹಕ್ಕಿಪಿಕ್ಕಿ ಸಮುದಾಯಕ್ಕೆ ಸೇರಿದ 14 ವರ್ಷದ ಕಿವುಡ-ಮೂಕ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಬಿಡದಿಯ ಭದ್ರಾಪುರ ಗ್ರಾಮದ ವಾಸಿ ಲೇಟ್ ಯಲ್ಲಪ್ಪ ಮತ್ತು ಶೀಲಾ ದಂಪತಿಯ ಪುತ್ರಿ 14 ವರ್ಷದ ಖುಷಿ ಭಾನುವಾರ ಸಂಜೆ ಮನೆಯ ಮುಂದೆ ಆಡುವಾಗಲೇ ಕಣ್ಮರೆಯಾಗಿದ್ದಳು. ತಮ್ಮ ಮಗಳು ಕಾಣದಿದ್ದಕ್ಕೆ ತಾಯಿ ಶೀಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಸೋಮವಾರ ಬೆಳಗ್ಗೆ ಗ್ರಾಮದ ಬಳಿಯಿರುವ ರೈಲ್ವೆ ಹಳಿಯ ಪಕ್ಕದ ಹಳ್ಳದಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು. ಮಾತು ಬಾರದ, ಕಿವಿ ಕೇಳಿಸದ ಬಾಲಕಿಯ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿ, ಜತೆಗೆ ಕಬ್ಬಿಣದ ರಾಡಿನಿಂದ ಬಲವಾಗಿ ತಲೆಗೆ ಹೊಡೆದು ಕೊಲೆ ಮಾಡಿದ್ದರು.
ಖುಷಿ ಎಂಬ ಬಾಲಕಿಯ ಜೀವನ ಸುಖದಿಂದ ಇರಬೇಕಿತ್ತು. ಆದರೆ ರಾಕ್ಷಸರ ಅಟ್ಟಹಾಸಕ್ಕೆ ನಲುಗಿದ ಖುಷಿ ಕ್ರೌರ್ಯಕ್ಕೆ ಬಲಿಯಾಗಿದ್ದಾಳೆ. ಕಡು ಬಡತನದಲ್ಲಿಯೇ ಹುಟ್ಟಿಬೆಳೆದ ಈಕೆಗೆ ಆ ದೇವರು ಕೂಡ ಕೈಹಿಡಿಯಲಿಲ್ಲ. ಹಾಡಿ ಬೆಳೆದು ಸುಂದರ ಬದುಕನ್ನು ಕಟ್ಟಿಕೊಳ್ಳಬೇಕಿದ್ದ ಖುಷಿ ಅತ್ಯಾಚಾರಕ್ಕೆ ಬಲಿಯಾಗಿದ್ದಾಳೆ ಎನ್ನಲಾಗಿದೆ. ಇತ್ತ ಹೆತ್ತಮ್ಮ ಮಾತ್ರ ತನ್ನ ಮಗಳ ಸಾವನ್ನು ಕಂಡು ಕಣ್ಣೀರಿಟ್ಟಿದ್ದಾರೆ.
ಇನ್ನು ಮಗಳನ್ನು ಕಳೆದುಕೊಂಡ ತಾಯಿಯು ನನ್ನ ಮಗಳಿಗೆ ಮೊದಲೇ ಕಿವಿ ಕೇಳಿಸೋಲ್ಲ. ಮೂಗಿ. ಅಂತಹವಳ ಮೇಲೆ ಈ ರೀತಿಯಾಗಿರುವುದು ಸರಿನಾ. ಪಾಪಿಗಳು ಅವಳನ್ನು ಅತ್ಯಾಚಾರ ಮಾಡಿರುವುದಲ್ಲದೇ ಆಕೆ ಕತ್ತು, ಕೈಕಾಲು ಮುರಿದು ಸಾಯಿಸಿರೋದು ನ್ಯಾಯಾನ ಅಂತಾ ಬಿಕ್ಕಿಬಿಕ್ಕಿ ಅಳುತ್ತಿದ್ದಾಳೆ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರೋ ಈ ದೃಶ್ಯ ಕಂಡು ಜನರ ಮನಸ್ಸುಗಳು ಮರುಗುತ್ತಿವೆ. ಈ ತಾಯಿಯ ಆಕ್ರಂದನದ ಕೂಗು ಜೀವಂತ ಶವಗಳಾಗಿ ವರ್ತಿಸುತ್ತಿರುವ ರಾಕ್ಷಸರಿಗೆ ತಟ್ಟುತ್ತಿಲ್ಲ ಅಂತ ಜನ ಇಡೀ ಶಾಪ ಹಾಕ್ತಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್‌ಗೌಡ ಅವರ ಮಾರ್ಗದರ್ಶನದಲ್ಲಿ ರಾಮನಗರ ಡಿವೈಎಸ್‌ಪಿ ಶ್ರೀನಿವಾಸ್ ಹಾಗೂ ಬಿಡದಿ ಠಾಣೆ ಇನ್ಸ್‌ಪೆಕ್ಟರ್ ಶಂಕರ್‌ನಾಯಕ್ ನೇತೃತ್ವದಲ್ಲಿ ಪೊಲೀಸರ 3 ತನಿಖಾ ತಂಡಗಳನ್ನು ರಚಿಸಲಾಗಿದ್ದು, ಬಾಲಕಿಯ ಹಂತಕರ ಶೋಧ ಕಾರ್ಯಕ್ಕೆ ಚುರುಕು ನೀಡಲಾಗಿದೆ. ಪೊಲೀಸರು ಕೊಲೆ ಮಾಹಿತಿ ಕಲೆ ಹಾಕುತ್ತಿದ್ದಾರೆ ಎನ್ನಲಾಗಿದೆ. ಕೆಲ ದಿನಗಳಿಂದ ಅನುಮಾನಾಸ್ಪದ ರೀತಿಯಲ್ಲಿ ಓಡಾಡಿರುವ ವ್ಯಕ್ತಿಗಳು ಹಾಗೂ ವಾಹನಗಳ ಮಾಹಿತಿ ಕೂಡ ಸಂಗ್ರಹಿಸಲಾಗುತ್ತಿದೆಯಂತೆ. ಸ್ಥಳಕ್ಕೆ ಹಲವರು ಭೇಟಿ ನೀಡಿ ಸಾಂತ್ವನ ಹೇಳುತ್ತಿದ್ದಾರೆ. ಅದರಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ಭೇಟಿ ನೀಡಿದ್ದು, ಖುಷಿ ತಾಯಿ ಮತ್ತು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರ, ಜೊತೆಗೆ ಮೃತ ಖುಷಿ ಕುಟುಂಬಕ್ಕೆ ಜಿಲ್ಲಾಡಳಿತದ ವತಿಯಿಂದ 4 ಲಕ್ಷ ಹಾಗೂ ಪಂಚಾಯ್ತಿ ವತಿಯಿಂದ 50 ಸಾವಿರದ ಪರಿಹಾರದ ಚೆಕ್ಕನ್ನು ವಿತರಿಸಿದ್ದಾರೆ. ಈ ಪ್ರಕರಣದಲ್ಲಿ ಯಾರೇ ಇರಲಿ ಕ್ರಮವಹಿಸಬೇಕು. ಪೊಲೀಸರು ಎಲ್ಲ ಆಯಾಮಗಳಲ್ಲಿ ತನಿಖೆ ಮಾಡಲಿ. ಅವರಿಗೆ ನಾವು ಫ್ರೀ ಆ್ಯಂಡ್ ಕೊಟ್ಟಿದ್ದೇವೆ ಎಂದು ಡಿಸಿಎಂ ತಿಳಿಸಿದ್ದಾರೆ.
ಇತ್ತ ಅತ್ಯಾಚಾರ ವಿಚಾರವಾಗಿದೆ ಎನ್ನುವುದಕ್ಕೆ ಎಸ್‌ಎಫ್‌ಎಲ್ ಹಾಗೂ ಮರಣೋತ್ತರ ಪರೀಕ್ಷೆಯ ವೈದ್ಯಕೀಯ ವರದಿ ಹೊರಬಂದ ನಂತರವೇ ಪ್ರಕರಣದ ಸತ್ಯಾಂಶ ಏನೆಂದು ಬೆಳಕಿಗೆ ಬರಲಿದೆ. ಅದೇನೇ ಇರಲಿ ಅವರು ಹೇಳಿ ಕೇಳಿ ಅಲೆಮಾರಿ ಜನಾಂಗಕ್ಕೆ ಸೇರಿದ ಕುಟುಂಬ. ಸ್ವಂತ ನೆಲೆಯಿಲ್ಲದೆ ಪರದಾಡ್ತಾರೆ. ಇದರ ನಡುವೆ ಇಂತಹ ಘಟನೆಗಳು ನಡೆದರೆ ಎಲ್ಲಿ ಹೋಗಿ ಬದುಕಬೇಕು ಎನ್ನುವಂತಾಗಿದೆ. ಒಟ್ಟಿನಲ್ಲಿ ಖುಷಿಯಂತ ಎಷ್ಟೋ ಹೆಣ್ಣು ಮಕ್ಕಳು ಇಂತಹ ರಾಕ್ಷಸರ ಕ್ರೂರ ಕೃತ್ಯಕ್ಕೆ ಬಲಿಯಾಗ್ತಿದ್ದಾರೆ. ಖುಷಿ ಕೊಲೆ ಆರೋಪಿಗಳನ್ನು ಪತ್ತೆ ಹಚ್ಚಿ ತಕ್ಕ ಶಿಕ್ಷೆ ಕೊಡಿಸಬೇಕು ಅನ್ನೋ ಕೂಗು ಎಲ್ಲೆಡೆ ಕೇಳಿ ಬರ್ತಿದೆ.