ರಾಯಚೂರು : ಇಡ್ಲಿ ಬಂಡಿಯ ವಿಚಾರಕ್ಕೆ ಯುವಕನೋರ್ವನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವಂತಹ ಘಟನೆ ರಾಯಚೂರು ನಗರದ ಡಾ. ಜಾಕೀರ್ ಹುಸೇನ್ ವೃತ್ತದಲ್ಲಿ ನಡೆದಿದೆ. ರಾಯಚೂರು ನಗರದ ಜಹೀರಾಬಾದ್ ನಿವಾಸಿ ಸಾಧಿಕ್ ಎಂಬುವನು ಕೊಲೆಯಾದ ವ್ಯಕ್ತಿಯಾಗಿದ್ದಾನೆ.
ನಗರದ ಏಕ್ ಮಿನಾರ್ ರಸ್ತೆಯಲ್ಲಿರುವ ಜಾಕೀರ್ ಹುಸೇನ್ ವೃತ್ತದಲ್ಲಿ ಕರೀಂ ಎಂಬುವವರ ಗ್ಯಾಂಗ್ ನಿಂದ ಈ ಹತ್ಯೆ ನಡೆದಿದೆ ಎನ್ನಲಾಗ್ತಿದೆ. ಸಾಧಿಕ್ ಎಂಬುವನ ಮೇಲೆ ಕರೀಂ ಮತ್ತು ಆತನ ಗ್ಯಾಂಗ್ ಚಾಕುವಿನಿಂದ ಬರ್ಬರವಾಗಿ ಹಲ್ಲೆ ನಡೆಸಿ, ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ. ಇನ್ನು ಗಂಭೀರವಾಗಿ ಗಾಯಗೊಂಡಿದ್ದ ಸಾಧಿಕ್ ನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದು, ಇಡ್ಲಿ ಬಂಡಿಯ ವಿಚಾರದಿಂದ ಆರಂಭವಾದ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ ಎನ್ನಲಾಗ್ತಿದೆ. ಅಲ್ಲದೇ ಹಳೆ ವೈಷಮ್ಯ ಕೂಡ ಈ ಕೊಲೆಗೆ ಕಾರಣ ಎಂಬ ಶಂಕೆ ಕೂಡ ವ್ಯಕ್ತವಾಗಿದೆ.
ಸ್ಥಳಕ್ಕೆ ಕೂಡಲೇ ಸದರ್ ಬಜಾರ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿದಿದೆ.