ತುಮಕೂರು:
ಹೆಣ್ಣು..ಹೊನ್ನು..ಮಣ್ಣಿನ ವಿಚಾರ ಬಂದ್ರೆ ಮನುಷ್ಯನಿಗೆ ಯಾರೂ ಕೂಡ ಹೆಚ್ಚಲ್ಲ ಅನ್ನೋದಕ್ಕೆ ತುಮಕೂರಿನಲ್ಲಿ ನಡೆದಿರುವ ಈ ಘಟನೆಯೇ ಸಾಕ್ಷಿ. ಪಿತ್ರಾರ್ಜಿತ ಆಸ್ತಿ ವಿಚಾರಕ್ಕೆ ಗಲಾಟೆ ನಡೆದಿದ್ದು, ಸಹೋದರನೇ ತನ್ನ ಅಕ್ಕ-ತಂಗಿಯರಿಗೆ ಚಾಕು ಚುಚ್ಚಿ ಕೊಲ್ಲಲು ಪ್ರಯತ್ನಿಸಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಚಾಕುವಳ್ಳಿಪಾಳ್ಯದಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ನಡೆದಿರುವ ಘಟನೆಯಿದು. ಸಹೋದರನೇ ಅಕ್ಕ-ತಂಗಿಯರಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಲು ಯತ್ನಿಸಿದ್ದಾನೆ. ಚಾಕುವಿನಿಂದ ಸಹೋದರಿಯ ಮೇಲೆ ಹಲ್ಲೆಗೆ ಯತ್ನಿಸಿರುವ ಲೈವ್ ವಿಡಿಯೋ ಇದೀಗ ಲಭ್ಯವಾಗಿದ್ದು, ಈ ವಿಡಿಯೋ ನೋಡಿದವರು ಬೆಚ್ಚಿಬಿದ್ದಿದ್ದಾರೆ.
ಪಿತ್ರಾರ್ಜಿತ ಆಸ್ತಿ ಹಂಚಿಕೆ ವಿಚಾರದಲ್ಲಿ ನಡೆದಿರುವ ಜಗಳ ಇದು ಅನ್ನೋದು ಗೊತ್ತಾಗಿದೆ. ಚಾಕುವಳ್ಳಿಪಾಳ್ಯದ ಸುಧೀಂದ್ರ ಅನ್ನೋ ವ್ಯಕ್ತಿ ಸಹೋದರಿಯರ ಮೇಲೆ ಹಲ್ಲೆಗೆ ಮುಂದಾದ ವ್ಯಕ್ತಿ. ಸುದೀಂದ್ರ ತಂದೆ ದಿವಂಗತ ಗಿರಿಯಪ್ಪ ಮಕ್ಕಳಿಗೆ ಜಮೀನು ಭಾಗ ಮಾಡಿ ಕೊಟ್ಟಿದ್ರು. 2 ಎಕರೆ 20 ಗುಂಟೆ ಜಮೀನಿನಲ್ಲಿ 1 ಎಕರೆ ಮಗ ಸುದೀಂದ್ರನಿಗೆ, 20 ಗುಂಟೆ ಜಮೀನನ್ನ ದೊಡ್ಡ ಮಗಳ ಹೆಸರಿಗೆ ಮತ್ತು ಉಳಿದ ೨೦ ಗುಂಟೆ ಜಮೀನನ್ನ ಎರಡನೇ ಮಗಳು ಸುಮಿತ್ರಾಗೆ ಪಾಲು ಮಾಡಿಕೊಟ್ಟಿದ್ದರು. ಇದಲ್ಲದೇ ಉಳಿದ ೨೦ ಗುಂಟೆ ಜಮೀನನ್ನ ತಮ್ಮ ಜೀವನಾಂಶಕ್ಕಾಗಿ ಉಳಿಸಿಕೊಂಡಿದ್ದರು. ಗಿರಿಯಪ್ಪ ನಿಧನರಾದ ಬಳಿಕ ತಾಯಿಯನ್ನು ನೋಡಿಕೊಳ್ಳುವಂತೆ, ಕಿರಿಯ ಮಗಳು ಸುಮಿತ್ರಾ ಈ ಜಮೀನಿನ ಧಾನಪತ್ರ ಬರೆದಿದ್ದರು. ಕಳೆದ 2024ರ ಮೇ ನಲ್ಲಿ ಗಿರಿಯಪ್ಪ ನಿಧನರಾಗಿದ್ದರು. ತಂದೆ ನಿಧನದ ಬಳಿಕ ಹೆಣ್ಣುಮಕ್ಕಳನ್ನ ಜಮೀನಿನ ಕಡೆ ಹೋಗೋದಕ್ಕೆ ಈ ಸುಧೀಂದ್ರ ಬಿಡ್ತಾ ಇರಲಿಲ್ಲ. ಜಮೀನು ತಮ್ಮ ಹೆಸರುಗಳಿಗೆ ಖಾತೆಯಾಗಿದ್ದರೂ ಹೆಣ್ಣುಮಕ್ಕಳಿಬ್ಬರೂ ಅಲ್ಲಿಗೆ ಹೋಗುವಂತಿರಲಿಲ್ಲ. ಸಹೋದರ ಸುಧೀಂದ್ರ ಒದೇ ಪದೇ ಜಗಳ, ಗಲಾಟೆ ತೆಗೆಯುತ್ತಿದ್ದ.
ಮೊನ್ನೆ 19ರಂದು ಸಹೋದರಿಯರಿಬ್ಬರು ಚಾಕುವಳ್ಳಿಪಾಳ್ಯಕ್ಕೆ ತೆರಳಿದ್ದರು. 20ನೇ ತಾರೀಕು ತೋಟದಲ್ಲಿ ಬೋರ್ ವೆಲ್ ರಿಪೇರಿ ಮಾಡಿಸುವ ವೇಳೆ ಗಲಾಟೆ ನಡೆದಿದೆ. ಮಾತಿನ ಚಕಮಕಿ ನಡೆದು ಗಲಾಟೆ ವಿಕೋಪಕ್ಕೆ ಹೋಗಿದೆ. ಗಲಾಟೆ ವೇಳೆ ಚಾಕು ಹಿಡಿದು ಸುಧೀಂದ್ರ ಸಹೋದರಿಯರ ಮೇಲೆ ಹಲ್ಲೆ ನಡೆಸಿದ್ದಾನೆ. ಬಳಿಕ ಸಹೋದರಿಯರಿಗೆ ಪ್ರಾಣ ಬೆದರಿಕೆಯನ್ನೂ ಹಾಕಿದ್ದಾನೆ. ಸಹೋದರನ ರಂಪಾಟಕ್ಕೆ ಸಹೋದರಿಯರು ಭಯಭೀತರಾಗಿದ್ದಾರೆ. ಸಹೋದರನಿಗೆ ಹೆದರಿ ದೂರು ನೀಡೋದಕ್ಕೂ ಹಿಂದೇಟು ಹಾಕಿದ್ದಾರೆ. ದಂಡಿನಶಿವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.